Omicron Crisis: ಸಮುದಾಯಕ್ಕೆ ಹಬ್ಬುತ್ತಿದೆ ಒಮಿಕ್ರೋನ್‌: ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣವೇ ಇರಲ್ಲ

 


ನವದೆಹಲಿ(ಜ.24): ದೇಶದಲ್ಲಿ(India) ಕೊರೋನಾ ವೈರಸ್‌ನ ಒಮಿಕ್ರೋನ್‌ ರೂಪಾಂತರಿ ತಳಿ ಸಮುದಾಯಕ್ಕೆ(Community) ಹರಡುವ ಹಂತದಲ್ಲಿದೆ. ಅನೇಕ ಮೆಟ್ರೋ ನಗರಗಳಲ್ಲಿ ಈಗಾಗಲೇ ಈ ತಳಿಯ ಸೋಂಕೇ ಹೆಚ್ಚಾಗಿ ಹರಡುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಡಿ(Central Health Department) ಕಾರ್ಯನಿರ್ವಹಿಸುವ ಕೋವಿಡ್‌ ರೂಪಾಂತರಿಗಳನ್ನು ಅಧ್ಯಯನ ಮಾಡುವ ಇನ್ಸಾಕಾಗ್‌ ಕೇಂದ್ರ ಹೇಳಿದೆ.

ಇನ್ಸಾಕಾಗ್‌ ಸುಮಾರು 1.5 ಲಕ್ಷ ಕೋವಿಡ್‌ ಟೆಸ್ಟ್‌(Covid Test) ಮಾದರಿಗಳನ್ನು ಅಧ್ಯಯನಕ್ಕೊಳಪಡಿಸಿ, 1.27 ಲಕ್ಷ ಮಾದರಿಗಳನ್ನು ವಿಶ್ಲೇಷಿಸಿ ಭಾನುವಾರ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ, ದೇಶದಲ್ಲಿ ಒಮಿಕ್ರೋನ್‌ ತಳಿಯ ಸೋಂಕು ಸಮುದಾಯಕ್ಕೆ ಹರಡುವ ಹಂತದಲ್ಲಿದೆ. ಅನೇಕ ಮಹಾನಗರಗಳಲ್ಲಿ, ವಿಶೇಷವಾಗಿ ದೆಹಲಿ ಮತ್ತು ಮುಂಬೈನಲ್ಲಿ ಈ ತಳಿಯೇ ಪ್ರಮುಖವಾಗಿ ಹರಡುತ್ತಿದೆ. ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣ ಇರುವುದಿಲ್ಲ ಅಥವಾ ಬಹಳ ಸೌಮ್ಯವಾಗಿರುತ್ತದೆ. ಆದರೆ ಆಸ್ಪತ್ರೆಗೆ ದಾಖಲಾಗುವ ಹಾಗೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಈ ಅಲೆಯಲ್ಲೀಗ ಏರಿಕೆಯಾಗುತ್ತಿದೆ. ಹೀಗಾಗಿ ಅಪಾಯ ಇದ್ದೇ ಇದೆ ಎಂದು ತಿಳಿಸಿದೆ.

ಒಮಿಕ್ರೋನ್‌ನ ಇನ್ನೊಂದು ಉಪ ತಳಿಯಾದ ಬಿಎ.2 ಕೂಡ ದೇಶದಲ್ಲಿ ಕಂಡುಬಂದಿದ್ದು, ಒಟ್ಟು ಒಮಿಕ್ರೋನ್‌ ಸೋಂಕಿತರ ಪೈಕಿ ಈ ತಳಿಯ ಸೋಂಕಿತರ ಸಂಖ್ಯೆಯೂ ತಕ್ಕಮಟ್ಟಿಗೆ ಇದೆ. ಇತ್ತೀಚೆಗೆ ಪತ್ತೆಯಾದ ಬಿ.1.640.2 ಎಂಬ ಇನ್ನೊಂದು ತಳಿಯನ್ನೂ ಅಧ್ಯಯನಕ್ಕೆ ಒಳಪಡಿಸಲಾಗುತ್ತಿದೆ. ಅದು ವೇಗವಾಗಿ ಹರಡುತ್ತಿರುವುದಕ್ಕೆ ಅಥವಾ ರೋಗನಿರೋಧಕ ಶಕ್ತಿಯನ್ನು ಭೇದಿಸುತ್ತಿರುವುದಕ್ಕೆ ಸಾಕ್ಷ್ಯವಿಲ್ಲ. ಸದ್ಯಕ್ಕೆ ಅದು ಆತಂಕಪಡಬೇಕಾದ ತಳಿ ಅಲ್ಲ. ಭಾರತದಲ್ಲಿ ಆ ತಳಿ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದೆ.

ಒಮಿಕ್ರೋನ್‌ ಇನ್ನು ವಿದೇಶಿ ಪ್ರಯಾಣಿಕರಿಂದ ಭಾರತೀಯರಿಗೆ ಹರಡಬೇಕಿಲ್ಲ. ದೇಶದಲ್ಲಿ ಆಂತರಿಕವಾಗಿಯೇ ಅದು ಹರಡುತ್ತದೆ ಎಂದೂ ಇನ್ಸಾಕಾಗ್‌ ತಿಳಿಸಿದೆ.

ನವದೆಹಲಿ: ದೇಶಾದ್ಯಂತ ಕೊರೋನಾದ (Coronavirus) ಹೊಸ ರೂಪಾಂತರಿ ಒಮಿಕ್ರೋನ್‌ ಸೋಂಕು (Omicron Virus) ವೇಗವಾಗಿ ಹಬ್ಬುತ್ತಿರುವಾಗಲೇ, ಆ ಸೋಂಕು ಪತ್ತೆ ಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜೀನೋಮ್‌ ಸೀಕ್ವೆನ್ಸಿಂಗ್‌ (Genome Sequencing) ಲ್ಯಾಬ್‌ಗಳ ಪೈಕಿ 5 ಸದ್ದಿಲ್ಲದೆ ಬಂದ್‌ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. ವೈರಾಣುವಿನ ವಂಶವಾಹಿಯಲ್ಲಿರುವ ಡಿಎನ್‌ಎಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸುವುದೇ ಜೀನೋಮ್‌ ಸೀಕ್ವೆನ್ಸಿಂಗ್‌.

ಈ ಪ್ರಯೋಗ ನಡೆಸಲು ದೇಶದಲ್ಲಿ 38 ಪ್ರಯೋಗಾಲಯಗಳು ಮಾತ್ರವೇ ಇವೆ. ಜೀನೋಮ್‌ ಸೀಕ್ವೆನ್ಸಿಂಗ್‌ ಮೊದಲು ರಾಸಾಯನಿಕ ಕ್ರಿಯೆ ನಡೆಸುವುದಕ್ಕೆ 'ರೀ ಏಜೆಂಟ್‌' (ರಾಸಾಯನಿಕ ಕಾರಕ)ಗಳನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಅನುದಾನದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಐದು ಲ್ಯಾಬ್‌ಗಳು ಸ್ಥಗಿತಗೊಂಡಿವೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿತ್ತು.

ವೈರಾಣುವಿನ ಹೊಸ ಹೊಸ ಮಾದರಿ ಹಾಗೂ ಅವುಗಳ ವಿಕಸನವನ್ನು ಜೀನೋಮ್‌ ಸೀಕ್ವೆನ್ಸಿಂಗ್‌ನಿಂದ ಪತ್ತೆ ಮಾಡಬಹುದು. 5 ಲ್ಯಾಬ್‌ಗಳು ಬಂದ್‌ ಆಗಿರುವ ಕಾರಣ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಪರೀಕ್ಷೆ ಶೇ.40ರಷ್ಟುಕಡಿಮೆಯಾಗಿದೆ. ಒಮಿಕ್ರೋನ್‌ ಸೋಂಕು ಪತ್ತೆಯಾದ ಬಳಿಕ ಇಲ್ಲಿವರೆಗೆ 25 ಸಾವಿರ ಜೀನೋಮ್‌ ಸೀಕ್ವೆನ್ಸಿಂಗ್‌ ಮಾತ್ರ ಮಾಡಲಾಗಿದೆ. ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಕಾಣಿಸಿಕೊಂಡ ಬಳಿಕ 1.6 ಲಕ್ಷ ಸೀಕ್ವೆನ್ಸಿಂಗ್‌ ನಡೆಸಲಾಗಿದೆ. ದೇಶದಲ್ಲಿನ ಕೋವಿಡ್‌ (Covid19) ಸ್ಥಿತಿ ಪರಿಶೀಲಿಸಲು ಇತ್ತೀಚೆಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಜೀನೋಮ್‌ ಸೀಕ್ವೆನ್ಸಿಂಗ್‌ನ ಮಹತ್ವವನ್ನು ಒತ್ತಿ ಹೇಳಿದ್ದರು.

ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು (Covid Testing) ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ (States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಕೇಂದ್ರ ಹೆಚ್ಚುವರಿ ಆರೋಗ್ಯ ಕಾರ‍್ಯದರ್ಶಿ ಆರತಿ ಅಹುಜಾ (Arti Ahuja), ತತ್‌ಕ್ಷಣದಿಂದಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ಕೆಲವು ನಿರ್ದಿಷ್ಟಪ್ರದೇಶಗಳ ಕೋವಿಡ್‌ ಪಾಸಿಟಿವಿಟಿ (Covid Positivity) ಮೇಲೆ ನಿಗಾ ಇಡಲು ಕೋರಿದ್ದರು.

Comments