ವಿಜಯಪುರ: 7 ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು (ಕೆಎಸ್‌ಎಡಬ್ಲ್ಯುಯು) ಜ. 21ರಿಂದ 27ರ ವರೆಗೆ ರಜೆ ಘೋಷಣೆ ಮಾಡಿದೆ.
ಕೆಎಸ್‌ಎಡಬ್ಲ್ಯುಯು ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, 'ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಒಟ್ಟು ಏಳು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.
ಸೋಂಕಿತರಲ್ಲಿ, ಕೆಲವರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ ಮತ್ತು ಉಳಿದವರು ಲಕ್ಷಣರಹಿತರಾಗಿದ್ದಾರೆ. ವಿವಿಯಲ್ಲಿ ವಿದ್ಯಾರ್ಥಿಗಳಲ್ಲಿ ಮಾತ್ರ ಸೋಂಕು ಕಂಡು ಬಂದಿದ್ದು, ಸಿಬ್ಬಂದಿಗಳಲ್ಲಿ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದೆ.
ಯಾವುದೇ ಸಂಸ್ಥೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿಯಾದರೆ, ಅಂತಹ ಸಂಸ್ಥೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಒಂದು ವಾರ ರಜೆ ಘೋಷಿಸಬೇಕು ಎಂದು ಈ ಹಿಂದೆ ಜಿಲ್ಲಾಡಳಿತ ಮಂಡಳಿ ಆದೇಶಿಸಿತ್ತು. ಈ ಆದೇಶದಂತೆ ವಿಶ್ವವಿದ್ಯಾಲಯವರು ರಜೆಯನ್ನು ಘೋಷಿಸಿದೆ.
ಕೆಎಸ್‌ಎಡಬ್ಲ್ಯುಯು ಉಪಕುಲಪತಿ, ಪ್ರೊಫೆಸರ್ ಡಾ ಬಿ ಕೆ ತುಳಸಿಮಾಲಾ ಅವರು ಮಾತನಾಡಿ, 'ಸೋಂಕಿತ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಪೋಷಕರೊಂದಿಗೆ ತಮ್ಮ ಊರುಗಳಿಗೆ ಮರಳಿದ್ದಾರೆ. ಇನ್ನುಳಿದವರು ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಕೋವಿಡ್ ಕಿಟ್ ನೀಡಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿದ್ದು, ಎಲ್ಲರನ್ನೂ ಪರೀಕ್ಷೆಗೊಳಪಡಿಸಿದ್ದಾರೆ. ಶುಕ್ರವಾರ ವೈದ್ಯಕೀಯ ವರದಿ ಬರಲಿದೆ ಎಂದು ಹೇಳಿದ್ದಾರೆ.
ಸೋಂಕು ಹಿನ್ನೆಲೆಯಲ್ಲಿ ವಿವಿಯಲ್ಲಿ ಒಂದು ವಾರದವರೆಗೆ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಿಶ್ವವಿದ್ಯಾನಿಲಯ ಆಡಳಿತ ಬ್ಲಾಕ್ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಎಲ್ಲಾ ತರಗತಿ ಕೊಠಡಿಗಳು, ಹಾಸ್ಟೆಲ್ ಮತ್ತು ಎಲ್ಲಾ ವಿಭಾಗಗಳ ವಿವಿಧ ಬ್ಲಾಕ್‌ಗಳನ್ನು ಸ್ಯಾನಿಟೈಸ್ ಮಾಡಿದ್ದೇವೆ. ವಿಶ್ವವಿದ್ಯಾಲಯದ ಆವರಣದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ
Comments
Post a Comment