ಶಾಲೆ ಪುನರಾರಂಭ ಸೂಕ್ತ; ಸರ್ಕಾರಕ್ಕೆ ಕಾರ್ಯಪಡೆ ಸಲಹೆ

June 20, 2021
Sunday, June 20, 2021

 


ಬೆಂಗಳೂರು: ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಬಂದಿರುವ ನಡುವೆಯೇ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಆಯಾ ಪ್ರದೇಶಕ್ಕೆ ತಕ್ಕಂತೆ ಶಾಲೆ ಆರಂಭಿಸಬಹುದೆಂದು ಕೋವಿಡ್ ಮೂರನೇ ಅಲೆ ಸಂಬಂಧ ರಚಿಸಲಾಗಿರುವ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಕಾರ್ಯಪಡೆ ಸರ್ಕಾರಕ್ಕೆ ಸಲಹೆ ನೀಡಿದೆ.

ವಿವಿಧ ಆಯಾಮಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ 91 ಪುಟಗಳ 17 ಅಂಶಗಳನ್ನೊಳಗೊಂಡ ಮಧ್ಯಂತರ ವರದಿಯನ್ನು ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಆರೋಗ್ಯ ವ್ಯವಸ್ಥೆ ತಯಾರಿ ಮತ್ತು ಇತರ ವಿಚಾರಗಳನ್ನು ಪ್ರಸ್ತಾಪಮಾಡಲಾಗಿದೆ. ಮುಖ್ಯವಾಗಿ ಶಾಲೆ ಆರಂಭದ ಬಗ್ಗೆ ಗಮನ ಸೆಳೆಯಲಾಗಿದೆ.

ರಾಜ್ಯದಲ್ಲಿ ಎರಡನೇ ಅಲೆ ತಗ್ಗಿದೆ. ಇನ್ನು ಕೆಲವು ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಬಹುದು. ಈ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸೂಕ್ತವಾದೀತು.

ಜತೆಗೆ ಪ್ರತಿ ಪ್ರದೇಶದ ಮೇಲೆ ಸೂಕ್ಷ್ಮ ಗಮನವಿಟ್ಟು, ಸೋಂಕಿನ ಪ್ರಮಾಣ ಹೆಚ್ಚುವ ಲಕ್ಷಣ ಕಾಣಿಸಿದರೆ ತಕ್ಷಣ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಹೇಗಿದ್ದರೂ ವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ. ಒಮ್ಮೆ ಲಸಿಕೆ ಸಿದ್ಧವಾದ ಕೂಡಲೇ ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸಿ ಆದ್ಯತೆ ಮೇಲೆ ಮಕ್ಕಳಿಗೆ ನೀಡಬಹುದು. ಅಲ್ಲಿಯವರೆಗೆ ಮುಂಜಾಗ್ರತೆ ವಹಿಸಿ ಶಾಲೆ ನಡೆಸಲು ಕ್ರಮಕೈಗೊಳ್ಳಬಹುದಾಗಿದೆ ಎಂದಿದ್ದಾರೆ. ಸದ್ಯ ಎಲ್ಲಿ ಕರೊನಾ ಹೆಚ್ಚಿದೆಯೋ ಅಲ್ಲಿ ಶಾಲೆ ನಡೆಸುವುದು ಬೇಡ. ಸೋಂಕಿನ ಪ್ರಮಾಣ ಕಡಿಮೆ ಇರುವಲ್ಲಿ ಆರಂಭಿಸಬಹುದು. ಇದಕ್ಕಾಗಿ ಒಂದು ಕಾರ್ಯವಿಧಾನ ಪ್ರಕ್ರಿಯೆ ಮಾಡಿಕೊಂಡು ಆ ಪ್ರಕಾರ ಕ್ರಮಕೈಗೊಳ್ಳಬಹುದು. ದಿನ ಬಿಟ್ಟು ದಿನವೋ, ಅಥವಾ ಅರ್ಧದಿನ ಪಾಳಿಯಂತೆಯೋ ಒಟ್ಟಿನಲ್ಲಿ ತರಗತಿ ಆರಂಭಿಸುವುದಕ್ಕೆ ತಜ್ಞರು ಒತ್ತಾಸೆ ನೀಡಿದ್ದಾರೆ.

ಒಂದು ವರ್ಷ ಮಗು ಕಲಿಕೆಯಿಂದ ದೂರ ಉಳಿದರೆ ಶೈಕ್ಷಣಿಕವಾಗಿ ಕಷ್ಟ ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲೂ ಸವಾಲು ಎದುರಿಸಬೇಕಾಗುತ್ತದೆ. ಅದರಲ್ಲೂ 2-3 ವರ್ಷ ಶಾಲೆಗೆ ಹೋಗದಿದ್ದರೆ ಬಹಳ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾರಣಕ್ಕೆ ಮಗು ಶಾಲೆ ಸಂಪರ್ಕದಿಂದ ದೂರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ತಜ್ಞರ ತಂಡ ಅಭಿಪ್ರಾಯ ತಿಳಿಸಿದೆ.ಡ

ಮಾಹಿತಿ ಸಂಗ್ರಹ: ಡಾ.ದೇವಿಶೆಟ್ಟಿ ನೇತೃತ್ವದ 13 ವೈದ್ಯರ ಸಮಿತಿಯಲ್ಲಿ ಮಕ್ಕಳ ತಜ್ಞರು, ಕ್ಯಾನ್ಸರ್ ತಜ್ಞರು, ಸಾಂಕ್ರಾಮಿಕ ರೋಗಗಳ ತಜ್ಞರು ಇದ್ದು, ಪ್ರತಿ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಸಮಗ್ರ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಬೇರೆ ಬೇರೆ ದೇಶಗಳಲ್ಲಿ ಅಲೆಯಿಂದ ಅಲೆಗೆ ಆದ ಬೆಳವಣಿಗೆ, ಮಕ್ಕಳ ಮೇಲಿನ ಪರಿಣಾಮ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಪೀಡಿಯಾಟ್ರಿಕ್ ಐಸಿಯು, ಪೀಡಿಯಾಟ್ರಿಕ್ ವೆಂಟಿಲೆಟರ್, ಮಕ್ಕಳ ತಜ್ಞರು ಸಿಬ್ಬಂದಿಯ ತಯಾರಿ- ತರಬೇತಿ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವು ಎಚ್ಚರಿಕೆ ಮಾಹಿತಿಯನ್ನೂ ಪ್ರಸ್ತಾಪಿಸಲಾಗಿದೆ.

ಸಲಹೆಗೆ ಕಾರಣ: ದಕ್ಷಿಣ ಆಫ್ರಿಕಾದಲ್ಲಿ ಎಬೋಲಾ ಬಂದ ಸಂದರ್ಭದಲ್ಲಿ ಮಕ್ಕಳು ದೀರ್ಘ ಅವಧಿಯಲ್ಲಿ ಶಾಲೆಗೆ ಹೋಗಲಾಗಲಿಲ್ಲ. ಇದರಿಂದ ಶೈಕ್ಷಣಿಕವಾಗಿ ಸಮಸ್ಯೆ ಎದುರಿಸಿದರು. ಇಲ್ಲೂ ಆ ರೀತಿ ಆಗಬಾರದು. ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ನಡೆಸುವುದು ಸೂಕ್ತ ಎಂದು ತಜ್ಞರು ಸರ್ಕಾರಕ್ಕೆ ತಿಳಿಹೇಳಿದ್ದಾರೆ.

ಅಪೌಷ್ಟಿಕತೆ ನಿವಾರಣೆಗೆ ಸಂಕೇಶ್ವರರ ಸಲಹೆ

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಕರೊನಾ ಗಾಢ ಪರಿಣಾಮ ಬೀರಬಹುದೆಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಮುಂಜಾಗ್ರತೆ ವಹಿಸಬೇಕಿದ್ದ್ದು, ಸ್ಪಿರುಲಿನಾ ಮಾತ್ರೆಗಳನ್ನು ನೀಡುವ ಅಗತ್ಯ ಇದೆ ಎಂದು ವಿಆರ್​ಎಲ್ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟಿದ್ದಾರೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಸ್ಪಿರುಲಿನಾ ಮಾತ್ರೆ ಅತ್ಯುತ್ತಮ ಪರಿಹಾರ ಎಂಬುದು ಅನೇಕ ಸಂದರ್ಭಗಳಲ್ಲಿ ಈಗಾಗಲೇ ಸಾಬೀತಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ದೇಶಾದ್ಯಂತ ಕನಿಷ್ಠ ಕೇಸ್: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕರೊನಾ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಭಾನುವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 58,419 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಇದೇ ಅವಧಿಯಲ್ಲಿ ರಾಜ್ಯದಲ್ಲಿ 4,517 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 120 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 993 ಮಂದಿಗೆ ಸೋಂಕು ದೃಢಪಟ್ಟಿದ್ದು, 12 ಮಂದಿ ಮೃತಪಟ್ಟಿದ್ದಾರೆ.

ವರದಿ ಪ್ರಮುಖಾಂಶ

  • 0-18 ವರ್ಷ ವಯೋಮಾನದವರು 2.38 ಕೋಟಿಯಷ್ಟಿರಬಹುದೆಂದು ಅಂದಾಜಿಸಲಾಗಿದೆ
  • ಸೋಂಕು ಗರಿಷ್ಠ ಪ್ರಮಾಣಕ್ಕೆ ಏರಿದಲ್ಲಿ 3.40 ಲಕ್ಷ ಮಂದಿಗೆ ಸೋಂಕು ತಗುಲುವ ಅಂದಾಜಿದೆ
  • ಈ ವರ್ಗಕ್ಕಾಗಿ 23,804 ಬೆಡ್ (ಆಸ್ಪತ್ರೆಗಳಲ್ಲಿ) ಬೇಕಾಗಬಹುದು, 6,801 ಐಸಿಯು ಬೆಡ್ ಮೀಸಲಿಟ್ಟುಕೊಳ್ಳಬೇಕಾಗಬಹುದು
  • ಕೋವಿಡ್ ಕೇರ್ ಸೆಂಟರ್​ಗಳಲ್ಲಿ 43 ಸಾವಿರ ಬೆಡ್ ಬೇಕಾಗಬಹುದು
  • 4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಕ್ಕರೆ ಗಂಭೀರ ಹಾನಿ ತಪ್ಪಿಸಬಹುದು

ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಆದರೆ ರಾಜ್ಯದಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಬಂದಿದ್ದರೂ ಸೋಂಕು ಪ್ರಮಾಣ ದರ ಪೂರ್ಣ ಕಡಿಮೆಯಾಗಿಲ್ಲ. ಜತೆಗೆ ಮಕ್ಕಳಿಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಈ ವೇಳೆ ಶಾಲೆ ಆರಂಭಿಸಿದರೆ ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ಇದರ ನಡುವೆ 3ನೇ ಅಲೆಯ ಬಗ್ಗೆ ತಜ್ಞರ ಎಚ್ಚರಿಕೆ ಇದೆ. ಹಾಗಾಗಿ ಆತುರ ಬೇಡ. ಈ ಎಲ್ಲ ಅಂಶ ಪರಿಗಣಿಸಿ ತೀರ್ವನಕ್ಕೆ ಬರುವುದು ಸೂಕ್ತ.

| ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

ಶಾಲೆ ಆರಂಭವಾಗದೆ ಇರುವುದರಿಂದ ಬಾಲಕಾರ್ವಿುಕ ಪದ್ಧತಿ ಜೀತ ಪದ್ಧತಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಶಾಲೆ ಆರಂಭ ಸೂಕ್ತ. ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಸುರಕ್ಷತಾ ಕ್ರಮ ಅನುಸರಿಸಿ ಶಾಲೆ ಆರಂಭಿಸುವುದು ಉತ್ತಮ.

Thanks for reading ಶಾಲೆ ಪುನರಾರಂಭ ಸೂಕ್ತ; ಸರ್ಕಾರಕ್ಕೆ ಕಾರ್ಯಪಡೆ ಸಲಹೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಶಾಲೆ ಪುನರಾರಂಭ ಸೂಕ್ತ; ಸರ್ಕಾರಕ್ಕೆ ಕಾರ್ಯಪಡೆ ಸಲಹೆ

Post a Comment