ಹಾಸನ: ಸಾಕುನಾಯಿ ಹೊತ್ತೊಯ್ದ ಚಿರತೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

June 16, 2021
Wednesday, June 16, 2021

 


ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಕಾಟ ಜನರನ್ನು ಬೆಂಬಿಡದಂತೆ ಕಾಡುತ್ತಿದ್ದರೆ, ಇತ್ತ ಬಯಲು ಸೀಮೆಯಲ್ಲಿ ಚಿರತೆಗಳು ಜನರಲ್ಲಿ ಜೀವ ಭಯ ಸೃಷ್ಟಿ ಮಾಡುತ್ತಿವೆ. ಹೊಲ ಗದ್ದೆಗಳಲ್ಲಿ ಕಾಣಿಸಿಕೊಂಡು ಭೀತಿ ತರುತ್ತಿದ್ದ ಚಿರತೆಗಳು ಈಗೀಗ ಊರೊಳಗೆ ಬರುವುದಕ್ಕೆ ಶುರುಮಾಡಿವೆ. ಅಹಾರಕ್ಕಾಗಿ ಮನೆಯೊಳಗೆ ನುಗ್ಗುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿದ್ದು, ನಿನ್ನೆ (ಜೂನ್ 15) ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ.

ಗ್ರಾಮದ ಮಲ್ಲೆಗೌಡ ಎಂಬುವವರ ಸಾಕುನಾಯಿಯನ್ನ ಚಿರತೆಯೊಂದು ರಾತ್ರಿ ಹೊತ್ತೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯ ಸುರಕ್ಷತೆಗಾಗಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಚಿರತೆಯ ಕರಾಮತ್ತು ದಾಖಲಾಗಿದೆ.

ಮಧ್ಯರಾತ್ರಿ 2 ಗಂಟೆ 38 ನಿಮಿಷದಲ್ಲಿ ಮನೆ ಬಳಿ ಬಂದಿರುವ ಚಿರತೆ ಮನೆಯ ಸುತ್ತ ಒಂದು ಸುತ್ತು ಹಾಕಿ ಏನಾದರೂ ಅಹಾರ ಸಿಗುತ್ತಾ ಎಂದು ಹುಡುಕಾಡಿದೆ. ಕೊನೆಗೆ ಮನೆಯ ಕಾಂಪೌಂಡ್ ಒಳಗೆ ನಾಯಿಯೊಂದು ನಿದ್ರೆಗೆ ಜಾರಿರುವುದು ಗೊತ್ತಾಗುತ್ತಲೆ ಸದ್ದಿಲ್ಲದೆ ನಾಯಿಯ ಕುತ್ತಿಗೆಗೆ ಬಾಯಿ ಹಾಕಿ ಶ್ವಾನವನ್ನ ಹೊತ್ತೊಯ್ದಿದೆ. ಬೆಳಿಗ್ಗೆ ಎದ್ದು ಮನೆಯ ಮುಂದೆ ನಾಯಿ ಇಲ್ಲದಿರೋದನ್ನ ಗಮನಿಸಿದ ಮನೆಯವರು ಸುತ್ತ ಮುತ್ತ ಹುಡುಕಾಡಿದ್ದಾರೆ.

ಯಾರೋ ಕಳ್ಳರು ನಾಯಿ ಹೊತ್ತೊಯ್ದಿದ್ದಾರಾ ಎಂದು ಮನೆಯಲ್ಲಿದ್ದ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಚಿರತೆ ದೃಶ್ಯ ಸೆರೆಯಾಗಿದೆ. ಮನೆಯ ಸಮೀಪವೇ ಚಿರತೆ ಬಂದು ಹೋಗಿರುವ ವಿಚಾರ ತಿಳಿಯುತ್ತಲೆ ಗ್ರಾಮದಲ್ಲಿ ಆತಂಕ ಹೆಚ್ಚಾಗಿದ್ದು, ಕೂಡಲೆ ಚಿರತೆ ಸೆರೆಗೆ ಜನರು ಒತ್ತಾಯಿಸಿದ್ದಾರೆ.

ಚಿರತೆ ಬಗ್ಗೆ ಮಾಹಿತಿ ಇದ್ದು ಪರಿಶೀಲನೆಗಾಗಿ ನಮ್ಮ ಸಿಬ್ಬಂದಿ ಯನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಮಾಹಿತಿ ಖಚಿತಪಡಿಸಿಕೊಂಡ ಮುಂದಿನ ಕ್ರಮ ವಹಿಸುತ್ತೇವೆ ಎಂದು ಹಾಸನ ಡಿಸಿಎಫ್ ಡಾ.ಬಸವರಾಜ್ ತಿಳಿಸಿದ್ದಾರೆ.

Thanks for reading ಹಾಸನ: ಸಾಕುನಾಯಿ ಹೊತ್ತೊಯ್ದ ಚಿರತೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಾಸನ: ಸಾಕುನಾಯಿ ಹೊತ್ತೊಯ್ದ ಚಿರತೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Post a Comment