2 ದಿನ ಮಾತ್ರ ಎಸ್‌ಎಸ್‌ಎಲ್'ಸಿ ಪರೀಕ್ಷೆ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

June 18, 2021
Friday, June 18, 2021

 


ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್'ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡು ದಿನ ಮಾತ್ರ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

ಪರೀಕ್ಷೆ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿರುವ ಶಿಕ್ಷಣ ಇಲಾಖೆ, ಕೋವಿಡ್ ನಿಂದ ಎಸ್‌ಎಸ್‌ಎಲ್'ಸಿ ವಿದ್ಯಾರ್ಥಿಗಳ ಹಿಂದಿನ ಸಾಲಿನ (9ನೇ ತರಗತಿ) ಪರೀಕ್ಷೆ ನಡೆದಿಲ್ಲ. ಎಸ್‌ಎಸ್‌ಎಲ್'ಸಿ ಪ್ರಿಪರೇಟರಿ ಸೇರಿ ಯಾವುದೇ ಪರೀಕ್ಷೆಗಳೂ ನಡೆದಿಲ್ಲ. ಹೀಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಪರೀಕ್ಷೆ ಸರಳೀಕರಿಸಿ ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೇವಲ ಬಹು ಉತ್ತರ ಆಯ್ಕೆ ಪ್ರಶ್ನೆ ಆಧಾರಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಆರು ದಿನ ಪರೀಕ್ಷೆ ನಡೆಸಿದರೆ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರತಿ ಮೂರು ವಿಷಯಕ್ಕೆ ಒಂದೊಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು. ಒಟ್ಟು ಮೂರು ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು.

3 ಭಾಷಾ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಪರೀಕ್ಷಾ ಸಮಯವನ್ನು ಅಪಹರಾಹ್ನ 10.30ರಿಂದ 1.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಈ ವರ್ಷ ಪರೀಕ್ಷಾ ಕೇಂದ್ರಗಳನ್ನು ದುಪ್ಪಟ್ಟುಗೊಳಿಸಲಾಗುವುದು. ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಂತೆ ಒಂದು ಡೆಸ್ಕ್'ಗೆ ಕೇವಲ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಈ ಬಾರಿ ಯಾರನ್ನೂ ಅನುತ್ತೀರ್ಣಗೊಳಿಸುವುದಿಲ್ಲ. ಪಾಸಾಗಲು ಅಗತ್ಯ ಕನಿಷ್ಠ ಅಂಕ ನೀಡಲಾಗುವುದು. ಪ್ರತಿ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳನ್ನು ಗರಿಷ್ಠ 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ನೀಡಲಾಗುವುದು. ಅಂಕ ಹಾಗೂ ಗ್ರೇಡ್ ಎರಡೂ ಆಧಾರದಲ್ಲಿ ಫಲಿತಾಂಶ ನೀಡಲಾಗುತ್ತದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

ಎಸ್‌ಎಸ್‌ಎಲ್'ಸಿಗೆ ನೋಂದಾಯಿಸಿಕೊಂಡಿರುವ 8.77 ಲಕ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಇತರೆ ಸಿಬ್ಬಂದಿ ಸೇರಿ 1 ಲಕ್ಷ ಮಂದಿಗೆ ಎನ್95 ಮಾಸ್ಕ್ ಖರೀದಿಸಿ ನೀಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಧಿಯಿಂದ ಅನುದಾನ ಬಳಕೆಗೆ ಇಲಾಖೆ ಒಪ್ಪಿಗೆ ನೀಡಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯಗೊಳಿಸಲಾಗುವುದು ಎಂದಿದೆ.

Thanks for reading 2 ದಿನ ಮಾತ್ರ ಎಸ್‌ಎಸ್‌ಎಲ್'ಸಿ ಪರೀಕ್ಷೆ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 2 ದಿನ ಮಾತ್ರ ಎಸ್‌ಎಸ್‌ಎಲ್'ಸಿ ಪರೀಕ್ಷೆ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

Post a Comment