ರಾತ್ರಿ ಕಂಡ ಕನಸಿಗೆ ಒಂದಷ್ಟು ಕಲ್ಪನೆಗಳನ್ನು ತುಂಬಿ ಬರೆದ ಸಣ್ಣ ಕತೆ...

April 25, 2021

 


ರಾತ್ರಿ ಕಂಡ ಕನಸಿಗೆ ಒಂದಷ್ಟು ಕಲ್ಪನೆಗಳನ್ನು ತುಂಬಿ ಬರೆದ ಸಣ್ಣ ಕತೆ...

    
     ನಾ ಕಲಿತ ಶಾಲೆಗೆ ನಾ ಟೀಚರ್ ಆಗಿ ಕೆಲಸಕ್ಕೆ ಸೇರಿ ಕೇವಲ ಹದಿನೈದು ದಿನಗಳಾಗಿತ್ತಷ್ಟೇ..ಅದೇನೋ ವಿಚಿತ್ರ ಖುಷಿಯಲ್ಲಿದ್ದೆ....ಮನೆಯಿಂದ ಶಾಲೆಗೆ ಸುಮಾರು ನಲವತ್ತೈದು ನಿಮಿಷಗಳ ಕಾಲ್ನಡಿಗೆ..ಇಪ್ಪತ್ತು ನಿಮಿಷ ರಸ್ತೆಯಲ್ಲಾದರೆ ಇನ್ನುಳಿದ ಇಪ್ಪತೈದು ನಿಮಿಷ ಒಂದು ದೊಡ್ಡ ಗದ್ದೆ,ಅದರ ಪಕ್ಕ ಹರಿವ ಸಣ್ಣ ತೊರೆ ಅದನ್ನು ದಾಟಿ ಕೊಂಚ ಮೇಲೆ ಹತ್ತಿ ಹೋದರೆ ಸಣ್ಣ ಗುಡ್ಡದಂತಿದ್ದ ಕಾಡು ಅದರಲ್ಲೊಂದು ಕಾಲು ದಾರಿ ಅದನ್ನು ದಾಟಿ ನೂರೆಜ್ಜೆ ಹಾಕಿದರೆ ಮನೆ ಮುಟ್ಟಲು ಕೇವಲ ಮೂರೇ ನಿಮಿಷ...
 
   ಈ ಗುಡ್ಡದಂತಿದ್ದ ಕಾಡಿನ ಕಾಲು ದಾರಿಯನ್ನು ದಾಟಿಬಿಟ್ಟರೆ ನನಗೆ ಯುದ್ಧ ಗೆದ್ದಷ್ಟೇ ಖುಷಿ..ಇವತ್ತೂ ಶಾಲೆ ಮುಗಿದ ನಂತರ ಬಿರಬಿರ ಹೆಜ್ಜೆ ಹಾಕತೊಡಗಿದೆ..ಅಷ್ಟರಲ್ಲೇ ಮಳೆ ಹನಿಯಲು ಶುರು ಆಯಿತು..ನೋಡನೋಡುತ್ತಿದ್ದಂತೆ ಮಳೆ ತನ್ನ ವೇಗವನ್ನು ಹೆಚ್ವಿಸಿಕೊಂಡು ರಭಸದಿಂದ ಸುರಿಯಲು ಶುರುಮಾಡಿತು..

ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಸೀರೆಯ ಸೆರಗಿಡಿದು ನಡೆದರೂ ನೆನೆದಾಗಿತ್ತು..ಗದ್ದೆ ದಾಟಿ ತೊರೆಯ ಹತ್ತಿರ ಬಂದವಳಿಗೆ ತೊರೆ ದಾಟಲು ಹಾಕಿದ್ದ ಪಾಲ (ಮರದ ದಿಮ್ಮಿ) ನೀರಿನಲ್ಲಿ ಕೊಚ್ವಿಹೋಗಿದ್ದು ನೋಡಿ ಜೀವ ಜಗ್ಗಿತು...ನಿಧಾನವಾಗಿ ತೊರೆಯಲ್ಲಿ ಇಳಿದು ಹೇಗೋ ದಾಟಿದಾಯ್ತ. ಈಗ ಕಾಡಿನ ಕಾಲುದಾರಿಯಲ್ಲಿ ಹೋಗುವ ಸಾಹಸ..ಹೋಗಲೇ ಬೇಕಿತ್ತು..ಯಾರಾದರೂ ಬರುತ್ತಾರೋ ನೋಡೋಣ ಎಂದು ಒಂದಷ್ಟು ಹೊತ್ತು ಅಲ್ಲಿಯೇ ಕಾದರೂ ಯಾರೂ ಬರದಿದ್ದಾಗ ನಿಧಾನವಾಗಿ ಹನುಮಂತನನ್ನು ಮನದಲ್ಲೇ ನೆನೆದು ನಡೆಯಲಾರಂಭಿಸಿದೆ....
   
ಒಂದು ಹತ್ತು‌ ಹತ್ತು ಹೆಜ್ಜೆ ಹಾಕಿದ್ನೊ ಇಲ್ವೋ ಏನೋ ಚರಪರ ಸದ್ದು ಗಾಳಿಗೆ ಇರಬೇಕು ಅಂದುಕೊಂಡೆ...
ಮನೆಯ ಹತ್ತಿರದ ಈ ಸಣ್ಣ ಗುಡ್ಡದ ಕಾಡು ನನಗೆ ಒಂಥರ ವಿಸ್ಮಯ ತರಿಸುವ ಜಾಗ ನಾಲ್ಕಾರು ವಿಧದ ನೇರಳೆ ಹಣ್ಣಿನ ಮರ,ಕಾಡು ಮಲ್ಲಿಗೆಯ ಗಾಢ ಪರಿಮಳ,ಸಣ್ಣ ಸಣ್ಣಕಾಯಿಆಗಿ ಹಣ್ಣೇ ಆಗದೇ ಉದುರಿ ಹೋಗುವ ಸೀಬೆಯ ಗಿಡ..ಕಾಡು ಮಾವಿನ ಹಣ್ಣಿನ ಮರ,ಮಳೆಗಾಲದಲ್ಲಷ್ಟೇ ಸಿಗುವ ಕಳಿಲೆ..(bamboo shoot) ಅಪರೂಪಕ್ಕೆ ಕಾಣಿಸುವ ಚಂದದ ಹೂವುಗಳು ಇವೆಲ್ಲ ಇದ್ದರೂ ಒಂಟಿಯಾಗಿ ಓಡಾಡುವಾಗ ಭಯ ಬಿಟ್ಟು ಬೇರೇನು ಕಾಣಿಸದು..ಮತ್ತೇ ಹಿಂದಿನಿಂದ ಚರಪರ ಸದ್ದು ಯಾರೋ ನಡೆದು ಬರುತ್ತಿರುವ ಹಾಗೇ..ಸಧ್ಯ ಯಾರೋ ಜೊತೆ ಸಿಗುತ್ತಾರೆ ಅಂದಾಗ ಸಮಧಾನವಾಯ್ತು..ಹೆಜ್ಜೆಯ ಸದ್ದು ಹತ್ತಿರವಾಗುತ್ತಿದಂತೆ ಹಿಂದೆ ತಿರುಗಿ ನೋಡಿದೆ ನಮ್ಮ ಮನೆಗೆ ಕೊಂಚ ದೂರ ಇದ್ದ ಲಲಿತಮ್ಮ..ನನ್ನ ನೋಡಿ ಅವರಿಗೂ ಖುಷಿ ಆಯ್ತು..ಮಾತನಾಡುತ್ತ ಆಡುತ್ತ ಲಲಿತ್ತಮ್ಮನ ಸ್ವರ ಕೇಳಿಸದೇ ಹೋದಾಗ ಮೆಲ್ಲಗೆ ಹಿಂದೆ ತಿರುಗಿ ನೋಡಿದೆ ಅಲ್ಲಿ ಯಾರೂ ಇಲ್ಲ..ನಾ ಲಲಿತಮ್ಮನ ನೋಡಿದ್ದು ನಿಜ ಮಾತನಾಡಿದ್ದು ನಿಜ ಇದ್ದಕಿದ್ದಂತೆ ಮಾಯ ಆದ್ರೆ ನನ್ನ ಸ್ಥಿತಿ ಏನಾಗಬೇಡ..ಒಂದೇ ಓಟ ಓಡಿದ್ದೆ ನಾನು ಮನೆ ತಲುಪುವವರೆಗೂ ಹಿಂದೆ ತಿರುಗಿ ನೋಡಲೇ ಇಲ್ಲ...

ಇನ್ನೊಮ್ಮೆ ಲಲಿತಮ್ಮನ ನೋಡೋದಕ್ಕೂ ಧೈರ್ಯ ಇಲ್ಲ..ಎಲ್ಲಾ ಕನಸು ಅಂತ ಗೊತ್ತಾದ ಮೇಲೆ ಆದ‌ ಖುಷಿ ಅಷ್ಟಿಷ್ಟಲ್ಲ ಬಿಡಿ...

ರಮ್ಯಾ ಮನ್ವಿತಾ...Related Articles

Advertisement
Previous
Next Post »