ಬಸ್ಸಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ ಬಳಿ 3.25 ಕೋಟಿ ರೂ. ನಗದು ಹಣ ಪತ್ತೆ!

April 10, 2021

 


ಕರ್ನೂಲ್: ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿರುವ ಪಂಚಲಿಂಗಲ ಚೆಕ್‌ಪೋಸ್ಟ್‌ನಲ್ಲಿ ಶೋಧ ನಡೆಸುತ್ತಿದ್ದ ವೇಳೆ ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ 3.25 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಹಣವನ್ನು ಕರ್ನೂಲ್ ವಿಶೇಷ ಜಾರಿ ಬ್ಯೂರೋ(ಎಸ್‌ಇಬಿ) ವಶಪಡಿಸಿಕೊಂಡಿದೆ.

ಬೆಂಗಳೂರಿನ ಖಾಸಗಿ ಟ್ರಾವೆಲ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಬಿ.ಎ.ಚೇತನ್ ಕುಮಾರ್ ಮತ್ತು ಚೆನ್ನೈ ಮೂಲದ ಅರುಣ್ ಎಂಬ ವ್ಯಕ್ತಿಯಿಂದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹಣ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರ್ನೂಲ್ ಎಸ್ಪಿ ಡಾ.ಕೆ.ಫಕೀರಪ್ಪ ತಿಳಿಸಿದ್ದಾರೆ.

ಅರುಣ್ ಅವರು ಚೇತನ್ ಅವರನ್ನು ಮಾರ್ಚ್ 28 ರಂದು ವಿಮಾನದಲ್ಲಿ ರಾಯ್ಪುರಕ್ಕೆ ಕಳುಹಿಸಿದ್ದರು ಮತ್ತು ಅಲ್ಲಿಂದ ಅವರು ರಾಯಗಢ್ ಗೆ ಹೋದರು.

ಅವರು ರಾಯ್‌ಗಢದ ತ್ರೀ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಹೋಟೆಲ್ ನಲ್ಲಿದ್ದಾಗ, ಕೆಲವು ವ್ಯಕ್ತಿಗಳು ಅವರನ್ನು ಭೇಟಿ ಮಾಡಿ ಹಣವನ್ನು ನೀಡಿದರು. ನಂತರ ಏಪ್ರಿಲ್ 8ರಂದು ಚೇತನ್ ಅವರು ಬಿಲಾಸ್ಪುರಕ್ಕೆ ಹೋದರು, ಅಲ್ಲಿ ಅವರು ಇತರ ಕೆಲವು ವ್ಯಕ್ತಿಗಳನ್ನು ಭೇಟಿಯಾಗಬೇಕಿತ್ತು. ಆದರೆ ಅದು ಭೇಟಿ ಸಾಧ್ಯವಾಗದ ಕಾರಣ ಅವರು ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ಗೆ ಬಂದಿದ್ದರು. ಹೈದರಾಬಾದ್‌ನಿಂದ ಶುಕ್ರವಾರ ತಡರಾತ್ರಿ ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಎಸ್‌ಇಬಿ ತಂಡ ಹಣ ಪತ್ತೆ ಹಚ್ಚಿ, ಚೇತನ್ ನನ್ನು ಬಂಧಿಸಿದೆ.

ನಗದು ಹಣಕ್ಕೆ ಸಂಬಂಧಿಸಿದ ಸರಿಯಾದ ದಾಖಲೆಗಳ ನೀಡಲು ಸಾಧ್ಯವಾಗದ ಕಾರಣ ಚೇತನ್ ವಿರುದ್ಧ ಪೊಲೀಸರು ಸಿಆರ್ಪಿಸಿಯ ಸೆಕ್ಷನ್ 102 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಕ್ರಮಕ್ಕಾಗಿ ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಫಕೀರಪ್ಪ ತಿಳಿಸಿದ್ದಾರೆ.


Related Articles

Advertisement
Previous
Next Post »