ಮತ್ತೊಂದು ಸಿ.ಡಿ.ಸ್ಫೋಟ: ಸದನದಲ್ಲಿ CD ತೋರಿಸಿದ ಎಚ್.ಡಿ.ರೇವಣ್ಣ

March 09, 2021

 


ಬೆಂಗಳೂರು, (ಮಾ.09): ರಾಜ್ಯ ರಾಜ್ಯಕಾರಣದಲ್ಲಿ ಸಿ.ಡಿ. ಭಾರೀ ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿ.ಡಿ ಬಹಿರಂಗಗೊಂಡ ಬೆನ್ನಲ್ಲೇ ಮಿತ್ರಮಂಡಳಿಯ ಇತರ ಸಚಿವರಲ್ಲೂ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.

ಇದರ ಬೆನ್ನಲ್ಲೇ ಇಂದು (ಮಂಗಳವಾರ) ಬಜೆಟ್ ಅಧಿವೇಶನದಲ್ಲಿ ಮತ್ತೊಂದು ಸಿ.ಡಿ. ಸ್ಫೋಟಕಗೊಂಡಿದ್ದು, ಮತ್ತೆ ರಾಜ್ಯ ರಾಜಕಾರಣದಲ್ಲಿ ಸಿ.ಡಿ. ಸಂಚಲನ ಮೂಡಿಸಿದೆ.

ಹೌದು... ಹಾಸನದ ಸಹಕಾರ ಇಲಾಖೆ ಹೆಚ್ಚುವರಿ ನೊಂದಣಾಧಿಕಾರಿ ನಾರಾಯಣ ಅವರು ಬೆದರಿಕೆ ಹಾಕಿದ ಧ್ವನಿ ಮುದ್ರಿತ ಸಿ.ಡಿಯನ್ನು ಜೆಡಿಎಸ್ ಶಾಸಕ ಸದನದಲ್ಲಿ ಪ್ರದರ್ಶನ ಮಾಡಿದರು. ಅಧಿಕಾರಿಗಳ ಮಾತುಗಳು ಇರುವ ರೆಕಾರ್ಡ್ ಇದೆ ಎಂದು ಎಚ್‌.ಡಿ.ರೇವಣ್ಣ ಅವರು ಸ್ಪೀಕರ್ ಮುಂದೆ ಸಿಡಿ ತೋರಿಸಿದರು.

ಜಾರಕಿಹೊಳಿ ರಾಸಲೀಲೆ ಸಿ.ಡಿ. ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ!

ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ಕುಡಿದು ಬೈತಾರೆ. ಕುಡಿದು ಏನೇನೋ ಬೈತಾರೆ. ದಲಿತ ಸಮುದಾಯದ ಯುವಕನೊಬ್ಬನಿಗೆ ಆ ಅಧಿಕಾರಿ ಗನ್‌ನಿಂದ ಗುಂಡು ಹೊಡೀತಿನಿ ಅಂತ ಬೆದರಿಸಿದ್ದಾರೆ. ಒಂದು ಗುಂಡು ನಿನಗೆ ಹೊಡೀತೀನಿ, ಇನ್ನೊಂದು ಗುಂಡು ಯಾರಿಗೆ ಹೊಡೀಲಿ ಅಂತಾನೆ ಆ ಅಧಿಕಾರಿ. ನಮಗೂ ಗೌರವ ಕೊಡಲ್ಲ ಎಂದು ರೇವಣ್ಣ ಅಳಲು ತೋಡಿಕೊಂಡರು.

ಆ ಅಧಿಕಾರಿಗೆ ಶಾಸಕರೊಬ್ಬರ ಬೆಂಬಲ ಇದೆ. ಆದ್ರೆ, ಆ ಶಾಸಕರ ಹೆಸರು ಹೇಳಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂಗೌಡ ಹೆಸರು ಹೇಳದೆ ಆರೋಪ ಮಾಡಿದ್ದು, ಕೂಡಲೇ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕೆಂದು ಸದನದಲ್ಲಿ ಆಗ್ರಹಿಸಿದರು.

ರೇವಣ್ಣ ಆರೋಪಕ್ಕೆ ದನಿಗೂಡಿಸಿ ಬೆಂಬಲ ಸೂಚಿಸಿದ ಶಿವಲಿಂಗೇಗೌಡ, ಒಬ್ಬ ಶಾಸಕರು ಬೆದರಿಕೆ ಹಾಕಿದಾರೆ. ಆ ಅಧಿಕಾರಿ ವಿರುದ್ಧ ಎರಡು ಎಫ್‌ಐಆರ್ ಆಗಿದೆ. ಆದ್ದರಿಂದ ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದರು.

ಈ ವೇಳೆ ಪ್ರೀತಂಗೌಡಗೆ ಆ ಅಧಿಕಾರಿ ಆಪ್ತ ಅಂತ ಶಿವಲಿಂಗೇಗೌಡ ಕಾಲೆಳೆದರು. ಶಿವಲಿಂಗೇಗೌಡ ಮಾತಿಗೆ ಸಿಟ್ಟಾದ ಶಾಸಕ ಪ್ರೀತಂ ಗೌಡ, ನನ್ನನ್ನು ಯಾಕೆ ಎಳೀತೀರಿ? ಆ ಸಿಡಿಯ‌ ಅಸಲಿಯತ್ತು ಬಗ್ಗೆಯೂ ಕೇಳಿ ಎಂದರು. ಬಳಿಕ ಶಿವಲಿಂಗೇಗೌಡ, ರೇವಣ್ಣ ಹಾಗೂ ಪ್ರೀತಂಗೌಡ ಮಧ್ಯೆ ವಾಕ್ಸಮರ ನಡೆಯಿತು.

Related Articles

Advertisement
Previous
Next Post »