ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ : 'ಉಚಿತ ರೇಷನ್' ವಿತರಣೆ ಮುಂದುವರಿಕೆ

March 09, 2021

 


ಬೆಂಗಳೂರು : ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ದಾರರ ವಿರುದ್ಧ ಸಮರ ನಡೆಸುತ್ತಿದೆ. ಹೀಗೆ ಅನರ್ಹರು ಪಡೆದಿರುವಂತ ಬಿಪಿಎಲ್ ಕಾರ್ಡ್ ರದ್ದು ಪಡಿಸುವಂತ ಕಾರ್ಯವನ್ನು ಮುಂದುವರೆಸಿದೆ. ಇದೇ ಅನರ್ಹತೆಯ ಕಾರಣದಿಂದಾಗಿ ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ 2,28,188 ಬಿಪಿಎಲ್ ಕಾರ್ಡ್ ಗಳನ್ನು ರದ್ದು ಪಡಿಸಲಾಗಿದೆ. ರಾಜ್ಯ ಸರ್ಕಾರದ ಮುಂದೆ ಪಡಿತರ ವಿತರಣೆಗೆ ಯಾವುದೇ ಶುಲ್ಕ ವಿತರಿಸುವಂತ ಪ್ರಸ್ತಾಪ ಇಲ್ಲ. ಈಗ ನೀಡುತ್ತಿರುವಂತೆಯೇ ಉಚಿತವಾಗಿ ಪಡಿತರ ಧಾನ್ಯ ವಿತರಿಸುವುದಾಗಿ ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ವಿಧಾನಪರಿಷತ್ ನಲ್ಲಿ ಮೇಲ್ಮನೆ ಸದಸ್ಯ ಪಿ.ಆರ್.ರಮೇಶ್ ಅವರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿಯವರು, ರಾಜ್ಯದಲ್ಲಿ 10,90,951 ಅಂತ್ಯೋದಯ ಕಾರ್ಡ್ ಗಳಿವೆ.

ಆದ್ಯತಾ ಪಡಿತರ ಚೀಟಿಗಳು 1,16,83,545 ಇದ್ದಾವೆ. ಈ ಎಲ್ಲವೂ ಸೇರಿ ಒಟ್ಟು 1,27,74,496 ಪಡಿತರ ಕಾರ್ಡ್ ಗಳಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಈಗ ಆದ್ಯತಾ ಪಡಿತರ ಕಾರ್ಡ್ ಗಳಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಾಗೂ ಪ್ರಾದೇಶಿಕ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಕುಟುಂಬದ ವಾರ್ಷಿಕ ಆದಾಯ 120 ಲಕ್ಷ ಮಿತಿ ಮೀರಿದ್ದರೇ ಅಂತಹ ಬಿಪಿಎಲ್ ಕಾರ್ಡ್ ಗಳನ್ನು ಅನರ್ಹಗೊಳಿಸಲಾಗುತ್ತಿದೆ. ಹೀಗೆ ಇದುವರೆಗೆ 2,28,188 ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಕೊರೋನಾ ಸಂಕಷ್ಟದಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಸದ್ಯ ಪಡಿತರಕ್ಕೆ ಯಾವುದೇ ಶುಲ್ಕ ಪಡೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಈಗಾಗಲೇ ಕೊಡುತ್ತಿರುವಂತೆಯೇ ಉಚಿತ ರೇಷನ್ ಕೊಡಲಾಗುತ್ತದೆ ಎಂಬುದಾಗಿ ತಿಳಿಸಿದರು.


Related Articles

Advertisement
Previous
Next Post »