ಹುಡುಗಿಯೊಬ್ಬಳು ನಾಲ್ವರು ಯುವಕರ ಜೊತೆ ಓಡಿಹೋಗಿದ್ದು, ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.
ಇಂತಹುದೊಂದು ವಿಚಿತ್ರ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಅಜೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಗ್ರಾಮದ ಹುಡುಗಿ ನಾಲ್ವರು ಹುಡುಗರ ಜೊತೆ ಮನೆ ಬಿಟ್ಟು ಹೋಗಿದ್ದು, ಅವರಲ್ಲೊಬ್ಬ ಯುವಕನ ಸಂಬಂಧಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು. 5 ದಿನವಾದರೂ ಮಗಳು ಪತ್ತೆಯಾಗದಿದ್ದಾಗ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪೊಲೀಸರ ಜೊತೆ ಗ್ರಾಮಸ್ಥರು ಸಹ ಹುಡುಕಾಟಕ್ಕೆ ಮುಂದಾಗಿದ್ದು, ಅಂತಿಮವಾಗಿ ಹುಡುಗಿ ನಾಲ್ವರು ಯುವಕರೊಂದಿಗೆ ಸಿಕ್ಕಿಬಿದ್ದಿದ್ದಳು.
ಆಗ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲ ಹುಡುಗಿ ಪೋಷಕರು ಹಾಗೂ ಗ್ರಾಮಸ್ಥರನ್ನು ಕಾಡಿತ್ತು. ಯುವಕರನ್ನು ಕೇಳಿದರೆ ಯಾರೊಬ್ಬರೂ ವಿವಾಹವಾಗಲು ಮುಂದೆ ಬರಲಿಲ್ಲ. ಹುಡುಗಿಯೂ ಸಹ ಒಬ್ಬನನ್ನು ಆಯ್ಕೆ ಮಾಡಲಿಲ್ಲ. ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿಯಲ್ಲಿ ಬರೆದ ಗ್ರಾಮಸ್ಥರು ಒಂದು ಚೀಟಿಯನ್ನು ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಜೊತೆ ಹುಡುಗಿಯ ಮದುವೆ ಮಾಡಿಸಿದ್ದಾರೆ.
EmoticonEmoticon