ನನ್ನ ಸಿ.ಡಿ. ನಾನೇ ಬಿಡುಗಡೆ ಮಾಡ್ತೀನಾ? ನಾನು ನಿರಪರಾಧಿ: ಜಾರಕಿಹೊಳಿ

March 13, 2021
Saturday, March 13, 2021

ಬೆಂಗಳೂರು(ಮಾ.14): 'ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೇ ಅಶ್ಲೀಲ ವಿಡಿಯೋ ಇರುವ ಸಿ.ಡಿ. ಬಿಡುಗಡೆ ಮಾಡಿದ್ದಾರೆ' ಎಂಬ ಯುವತಿಯ ಆರೋಪವನ್ನು ಸ್ವತಃ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ. ಸಚಿವನಾಗಿದ್ದುಕೊಂಡು ನನ್ನ ವಿಡಿಯೋ ನಾನೇ ಬಿಡುಗಡೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.ವಿವಾದಿತ ಸಿ.ಡಿ.ಯಲ್ಲಿನ ಯುವತಿ ವಿಡಿಯೋ ಮೂಲಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅವರು, 'ನಾನು ನಿರಪರಾಧಿ. ಸತ್ಯ ಏನು ಎಂಬುದನ್ನು ಸಾಬೀತುಪಡಿಸುತ್ತೇನೆ. ನಾನು ದೂರು ನೀಡಿದ ಅರ್ಧಗಂಟೆಯಲ್ಲಿ ಯುವತಿಯ ವಿಡಿಯೋ ಹೊರಗೆ ಬರುತ್ತದೆ ಎಂದರೆ ಕಾಣದ ಕೈಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎಂಬುದನ್ನು ಗಮನಿಸಿ. ಸಚಿವನಾಗಿ ನನ್ನ ವಿಡಿಯೋ ನಾನೇ ಬಿಡುಗಡೆ ಮಾಡಲು ಸಾಧ್ಯನಾ? ಇದು ರಾಜಕೀಯ ಷಡ್ಯಂತ್ರ' ಎಂದು ತಿಳಿಸಿದರು.

ಹಲವರು ಬಲಿಪಶು:

ಇದೇ ವೇಳೆ, ಸಿ.ಡಿ. ಪ್ರಕರಣದ ಬಗ್ಗೆ ಶನಿವಾರ ಪೊಲೀಸರಿಗೆ ದೂರು ದಾಖಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸಿ.ಡಿ. ಪ್ರಕರಣ ದೊಡ್ಡ ರಾಜಕೀಯ ಷಡ್ಯಂತ್ರ. ಇದಕ್ಕೆ ನಾನು ಮಾತ್ರವಲ್ಲದೆ, ಇನ್ನೂ ಹಲವರು ಬಲಿಪಶುಗಳಾಗಿದ್ದಾರೆ. ಸಮಗ್ರ ತನಿಖೆ ನಡೆದರೆ ಮಾತ್ರ ಇದರ ಹಿಂದಿನ ರೂವಾರಿಗಳ ಹೆಸರು ಬಹಿರಂಗವಾಗುತ್ತದೆ. ಹೀಗಾಗಿಯೇ ದೂರಿನಲ್ಲಿ ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ' ಎನ್ನುವ ಮೂಲಕ ತಾವು ದೂರಿನಲ್ಲಿ ಏಕೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂಬುದನ್ನು ವಿವರಿಸಿದರು.

ಹೆಸರು ಉಲ್ಲೇಖಿಸಿದರೆ ಆ ಹೆಸರುಗಳಿಗೆ ಸೀಮಿತವಾಗಿ ತನಿಖೆ ನಡೆಯುತ್ತದೆ. ಸಮಗ್ರ ತನಿಖೆ ನಡೆದರೆ ಮಾತ್ರ ರಾಜಕೀಯ ಷಡ್ಯಂತ್ರದ ರೂವಾರಿಗಳ ಹೆಸರು ಬಹಿರಂಗವಾಗಲು ಸಾಧ್ಯ. ಕಾನೂನು ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಬ್ಲಾಕ್‌ಮೇಲ್‌ ಮಾಡಿರುವ ಬಗ್ಗೆಯೂ ಎಫ್‌ಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ಅಲ್ಲದೆ, ಕಾನೂನು ಹೋರಾಟ ಇದೀಗ ಆರಂಭವಾಗಿದ್ದು, ಅದು ಮಹಾನ್‌ ನಾಯಕನವರೆಗೂ ಮುಟ್ಟಲಿದೆ ಎಂದರು.

ಶನಿವಾರ ಅಧಿಕೃತವಾಗಿ ದೂರು ನೀಡಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾನೂನು ಹೋರಾಟ ಪ್ರಾರಂಭವಾಗಿದ್ದು, ಕೊನೆಯವರೆಗೆ ಬಿಡುವುದಿಲ್ಲ. ಅಂತಿಮ ಹಂತದವರೆಗೂ ಹೋರಾಟ ಮಾಡುತ್ತೇವೆ. ಕಾನೂನು ಪ್ರಕಾರವೇ ಮುಂದುವರಿಯುತ್ತೇವೆ. ರಾಜಕೀಯವಾಗಿ ತುಳಿಯಲು ನೂರಾರು ಕೋಟಿ ರು. ಖರ್ಚು ಮಾಡಿ ಷಡ್ಯಂತ್ರ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ದೆಹಲಿ ಮತ್ತು ಬೆಂಗಳೂರು ಕಾನೂನು ತಜ್ಞರು ಮಾಧ್ಯಮದವರ ಮುಂದೆ ಹೋಗಬೇಡಿ ಎಂದು ಸಲಹೆ ನೀಡಿದ್ದರು. ಆದರೂ, ಬೆಳಗ್ಗೆಯಿಂದ ಮಾಧ್ಯಮದವರು ಕಾಯುತ್ತಿರುವ ಕಾರಣ ಪ್ರತಿಕ್ರಿಯೆ ನೀಡಲು ಬಂದಿದ್ದೇನೆ ಎಂದರು.

Thanks for reading ನನ್ನ ಸಿ.ಡಿ. ನಾನೇ ಬಿಡುಗಡೆ ಮಾಡ್ತೀನಾ? ನಾನು ನಿರಪರಾಧಿ: ಜಾರಕಿಹೊಳಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನನ್ನ ಸಿ.ಡಿ. ನಾನೇ ಬಿಡುಗಡೆ ಮಾಡ್ತೀನಾ? ನಾನು ನಿರಪರಾಧಿ: ಜಾರಕಿಹೊಳಿ

Post a Comment