ಗಮನ ಸೆಳೆಯುತ್ತಿದೆ ಅಂಗಡಿಹಳ್ಳಿ ಸರ್ಕಾರಿ ಶಾಲೆ

March 07, 2021

 


ಹಾಸನ: ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಾದರಿ ಶಾಲೆಯಾಗಿ ಗಮನ ಸೆಳೆಯುತ್ತಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡು ಖಾಸಗಿ ಸ್ಕೂಲ್‌ಗಳಿಗೆ ಸಡ್ಡು ಹೊಡೆದಿದೆ.

ತಾಲ್ಲೂಕಿನಲ್ಲಿ ಎರಡನೇ ಅತಿ ಹೆಚ್ಚು ಮಕ್ಕಳು ಇರುವ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. ಮೊದಲು ಈ ಶಾಲೆ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ದಾನಿಗಳ ಕೃಪೆಯಿಂದ ಸುಣ್ಣ, ಬಣ್ಣದಿಂದ ಕೂಡಿ ಹೊಸದಾಗಿ ಕಂಗೊಳಿಸುತ್ತಿದೆ.

ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದ್ದ ಮಾನವ ಹಕ್ಕು ವೇದಿಕೆಯ ಅಧ್ಯಕ್ಷ ಮರಿಜೋಸೆಫ್‌ ಮತ್ತು ಹಕ್ಕಿಪಿಕ್ಕಿ ಜನಾಂಗದ ಮುಖಂಡ ಹೂರಾಜ್ ಅವರು ಕೋಲಿಯನ್ಸ್‌ ಏರೋಸ್ಪೇಸ್‌ ವ್ಯವಸ್ಥಾಪಕ ನಿರ್ದೇಶಕ ಕೃಷ್ಣೋಪರ್‌ ಅನಿಲ್‌ ರಾವ್‌ ಅವರನ್ನು ಸಂಪರ್ಕಿಸಿ, ಮನವೊಲಿಸಿದರು.

ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ₹60 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ, ಒಂದು ಸಭಾಂಗಣ ಮತ್ತು ಹಾಲಿ ಇದ್ದ ಎಲ್ಲಾ ಕೊಠಡಿಗಳ ನವೀಕರಣ ಮಾಡಿಕೊಟ್ಟಿದೆ.

ಅಡಿಗೆ ಕೋಣೆ, ಶೌಚಾಲಯಗಳು ಸ್ವಚ್ಛವಾಗಿ ನಿರ್ವಹಣೆಗೊಂಡಿದೆ.

ಶಾಲೆಯಲ್ಲಿ 7 ತರಗತಿ ಕೊಠಡಿ ಹಾಗೂ 2 ಶಿಕ್ಷಕರ ಕೊಠಡಿಗಳು ಇದ್ದು, ಹತ್ತು ಮಂದಿ ಶಿಕ್ಷಕರಿದ್ದಾರೆ. ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಕಲೆಗಳು ಸಂದೇಶ ಸಾರುತ್ತಿವೆ. ಪ್ರತಿ ಕೊಠಡಿಗೂ ನದಿಗಳ ಹೆಸರಾದ ಶರಾವತಿ, ನೇತ್ರಾವತಿ, ಯಗಚಿ, ಹೇಮಾವತಿ ಹೆಸರು ಇಡಲಾಗಿದೆ.

ಇದೀಗ 38 ಗುಂಟೆ ಆಟದ ಮೈದಾನವೂ ಶಾಲೆಗೆ ದೊರೆತಿದ್ದು, ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಸರ್ಕಾರಿ ಶಾಲೆಗಳಲ್ಲಿ ದಿನೇದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಅಂಗಡಿಹಳ್ಳಿ ಶಾಲೆಯಲ್ಲಿ ಮಾತ್ರ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ವರ್ಷ 213 ಮಕ್ಕಳು ಇದ್ದರು. ಪ್ರಸ್ತುತ ಒಂದರಿಂದ ಏಳನೇ ತರಗತಿಯವರೆಗೆ 260 ಮಕ್ಕಳು ಕಲಿಯುತ್ತಿದ್ದಾರೆ. ಈ ಪೈಕಿ 205 ಮಕ್ಕಳು ಅಲೆಮಾರಿ ಹಾಗೂ ಹಕ್ಕಿಪಕ್ಕಿ
ಸಮುದಾಯಕ್ಕೆ ಸೇರಿದವರು.

ಗೋಡೆಗಳ ಮೇಲೆ ಭೂ ಮಂಡಲ, ಸೂರ್ಯಗ್ರಹಣ, ಚಂದ್ರಗ್ರಹಣ ಹಾಗೂ ವಿಜ್ಞಾನ ವಿಷಯಗಳನ್ನು ಸರಳವಾಗಿ ಅರ್ಥವಾಗುವಂತೆ ಮಿದುಳು, ಸಸ್ಯದ ಭಾಗಗಳು, ಜಲಚಕ್ರ, ಹೃದಯ, ಮಾನವನ ದೇಹದ ಭಾಗ, ಜೀರ್ಣಾಂಗ ವ್ಯೂಹ ಹಾಗೂ ಮಕ್ಕಳ ಜ್ಞಾನದ ಹಸಿವು ಹೆಚ್ಚಿಸುವಂತೆ ಚಿತ್ರಗಳ ಮೂಲಕ ವಿವರಿಸಲಾಗಿದೆ. ಶಾಲಾ ಕೊಠಡಿಯೊಳಗೆ ಇದೇ ರೀತಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ.

ಶಾಲೆಯ ಆವರಣದಲ್ಲಿ ಸಮುದಾಯ ಭವನ ನಿರ್ಮಿಸುವ ಪ್ರಯತ್ನಕ್ಕೆ ವಿರೋಧ ವ್ಯಕ್ತವಾದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸಹ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

'ಗ್ರಾಮದವರೇ ಶಾಲೆಯ ಕೊಠಡಿ ಹಾಗೂ ಆವರಣದಲ್ಲಿ ಸತ್ತ ಕೋಳಿ ತಂದು ಹಾಕುತ್ತಿದ್ದರು. ಕಿಟಕಿಯಿಂದ ಮಣ್ಣು , ಗಾಜು ಬಿಸಾಡಿ ಹೋಗುತ್ತಿದ್ದರು. ಈಗ ಪರಿಸ್ಥಿತಿ ಸುಧಾರಿಸಿದೆ. ಶಾಲೆ ಅಭಿವೃದ್ಧಿ ಆಗಿರುವುದರಿಂದ ಅಂಗಡಿಹಳ್ಳಿ ಮಾತ್ರವಲ್ಲದೇ ಸುತ್ತಮುತ್ತಲ ಹಳ್ಳಿಗಳ ಮಕ್ಕಳು ದಾಖಲಾಗುತ್ತಿದ್ದಾರೆ ' ಎಂದು ದೈಹಿಕ ಶಿಕ್ಷಣ ಶಿಕ್ಷಕ ವಿಠ್ಠಲ ಮೂರ್ತಿ ಹೇಳಿದರು.


Related Articles

Advertisement
Previous
Next Post »