ವರದಕ್ಷಿಣೆ ಕಿರುಕುಳ: ನದಿ ತೀರದಲ್ಲಿ ನಿಂತು ವೀಡಿಯೋ ಚಿತ್ರೀಕರಿಸಿ ಆತ್ಮಹತ್ಯೆಗೈದ ಯುವತಿ

March 01, 2021

 


ಅಹ್ಮದಾಬಾದ್:‌ ಪತಿಯ ಮನೆಯವರ ವರದಕ್ಷಿಣೆಯ ಕಿರುಕುಳವನ್ನು ಸಹಿಸಲಾಗದೇ ಯುವತಿಯೋರ್ವಳು ನದಿ ತೀರದಲ್ಲಿ ನಿಂತು ವೀಡಿಯೋ ಚಿತ್ರೀಕರಣ ನಡೆಸಿ ತನ್ನ ಮಾತುಗಳನ್ನು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಘಟನೆಯು ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿರುವ ಸಬರಮತಿ ನದಿ ತೀರದಲ್ಲಿ ನಡೆದಿದೆ. ಆತ್ಮಹತ್ಯೆಗೈದ ಯುವತಿಯನ್ನು ಆಯಿಶಾ ಎಂದು ಗುರುತಿಸಲಾಗಿದೆ.

ಆಯಿಶಾ 2018ರಲ್ಲಿ ರಾಜಸ್ಥಾನದ ಆರಿಫ್‌ ಖಾನ್‌ ಎಂಬಾತನನ್ನು ಮದುವೆಯಾಗಿದ್ದು, ಮದುವೆಯ ಬಳಿಕ ಅತ್ತೆ, ಗಂಡ ಹಾಗೂ ಮನೆಯವರಿಂದ ವರದಕ್ಷಿಣೆ ತರುವಂತೆ ಕಿರುಕುಳ ಪ್ರಾರಂಭವಾಗಿತ್ತು ಹಾಗೂ ಹಿಂಸಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತಾದಂತೆ ಆಕೆ ವತ್ವಾ ಪೊಲೀಸ್‌ ಠಾಣೆಯಲ್ಲಿ ಅವರೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಳು ಎಂದು ತಿಳಿದು ಬಂದಿದೆ.

ಆಕೆಯ ವೀಡಿಯೋದಲ್ಲಿ, "ಅಪ್ಪಾ..

ನೀವು ಯಾವಾಗ ಈ ಕೇಸ್‌ ಕುರಿತು ಹೋರಾಡುತ್ತೀರಿ? ನನ್ನನ್ನು ಹೋರಾಡಲು ಜಗಳವಾಡಲು ಬಿಡಬೇಡಿ. ನನಗೆ ಜಗಳವಾಡಲು ಇಷ್ಟವಿಲ್ಲ. ಆರಿಫ್‌ ಗೆ ಸ್ವಾತಂತ್ರ್ಯ ಬೇಕು ಎಂದಾದರೆ ಸರಿ.. ಅವನು ಸ್ವತಂತ್ರನಾಗಿದ್ದಾನೆ. ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಅಲ್ಲಾಹನನ್ನು ಭೇಟಿಯಾಗಲು ತೆರಳುತ್ತಿದ್ದೇನೆ. ನಾನು ಅಲ್ಲಾಹನಲ್ಲಿ ಎಲ್ಲವನ್ನೂ ಹೇಳುತ್ತೇನೆ. ನಾನೇನು ತಪ್ಪು ಮಾಡಿದ್ದೆ? ನನಗೆ ಉತ್ತಮ ಪೋಷಕರು ಸಿಕ್ಕಿದ್ದಾರೆ. ಉತ್ತಮ ಸ್ನೇಹಿತರು ಸಿಕ್ಕಿದ್ದಾರೆ. ಆದರೆ ನನ್ನ ವಿಧಿ ಸರಿಯಾಗಿಲ್ಲವಷ್ಟೇ"

"ನನಗೇನೂ ಹೇಳಲಿಕ್ಕಿಲ್ಲ. ಸರ್ವಶಕ್ತ ದೇವರು ನನಗೆ ಸಣ್ಣ ಜೀವನವನ್ನು ದಯಪಾಲಿಸಿದ್ದಾನೆ. ಯಾವ ಪ್ರೀತಿ ನಿಮಗೆ ದಕ್ಕುವುದಿಲ್ಲವೋ, ಅದನ್ನು ಅನ್ವೇಷಿಸಿ ಅದರ ಹಿಂದೆ ಹೋಗಬೇಡಿ, ಆ ಪ್ರೀತಿ ಮದುವೆಯ ಬಳಿಕವೂ ಸಿಗುವುದಿಲ್ಲ"

ಸಬರಮತಿ ನದಿಯ ತೀರಿದಲ್ಲಿ ನಿಂತು "ಇದೊಂದು ಪ್ರೀತಿಯುತ ನದಿ. ಇದು ನನ್ನನ್ನು ಸೆಳೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ. ನಾನು ಗಾಳಿಯಂತೆ, ನಾನು ತೇಲಲು ಬಯಸುತ್ತೇನೆ. ನಾನಿಂದು ಸಂತೋಷವಾಗಿದ್ದೇನೆ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನೂ ಸೇರಿಸಿಕೊಳ್ಳಿ. ನಾನು ಸ್ವರ್ಗಕ್ಕೋ, ನರಕಕ್ಕೋ ಎಂದು ನನಗಿನ್ನೂ ತಿಳಿದಿಲ್ಲ" ಎಂದು ಆಕೆ ವೀಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ನದಿಗೆ ಹಾರಿ ಆತ್ಮಹತ್ಯೆ ಮಾಡುವ ಮುನ್ನ ಆಯಿಶಾ ತನ್ನ ತಂದೆ ತಾಯಿಗೆ ಕರೆ ಮಾಡಿದ್ದಳು ಎನ್ನಲಾಗಿದೆ. "ಇಲ್ಲಿಯವರೆಗೆ ಏನೆಲ್ಲಾ ನಡೆಯಿತೋ ಅದು ಸಾಕಾಗಿದೆ. ಇನ್ನು ಮುಂದೆ ನನಗೆ ಸಹಿಸಲು ಸಾಧ್ಯವಿಲ್ಲ. ಆರಿಫ್‌ ಗೆ ಸ್ವಾತಂತ್ರ್ಯ ಬೇಕಂತೆ. ನಾನು ಆತನಿಗೆ ಸ್ವಾತಂತ್ರ್ಯ ನೀಡುತ್ತೇನೆ" ಎಂದು ಆಕೆ ಹೇಳಿದ್ದಾಗಿ ವರದಿಯಾಗಿದೆ.

"ನಾನು ಈಗಾಗಲೇ ಆರಿಫ್‌ ಗೆ ಕರೆ ಮಾಡಿದ್ದೇನೆ. ನಿನಗೇನು ಮಾಡಬೇಕು ಎಂದು ಅನಿಸುತ್ತದೆಯೋ ಅದನ್ನು ಮಾಡು ಎಂದು ಆತ ಹೇಳಿದ್ದಾನೆ. ನಾನು ವೀಡಿಯೋ ಮಾಡುತ್ತಿದ್ದೇನೆ. ಆರಿಫ್‌ ನನ್ನು ಪೊಲೀಸರು ಬಂಧಿಸಬೇಕು. ನಾನು ಈಗಾಗಲೇ ವೀಡಿಯೋ ಮಾಡಿದ್ದೇನೆ. ನಾನು ಇದೀಗ ಧುಮುಕುತ್ತಿದ್ದೇನೆ" ಎಂದು ಆಕೆ ತಾಯಿಯ ಬಳಿ ಹೇಳಿದ್ದಾಗಿ ತಿಳಿದು ಬಂದಿದೆ.

ಈಜುಗಾರರು ಮತ್ತು ಅಗ್ನಿಶಾಮಕ ದಳದ ಪ್ರತಿನಿಧಿಗಳು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿ, ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಈ ಕುರಿತಾದಂತೆ ಆಕೆಯ ಪತಿ ಆರಿಫ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.Related Articles

Advertisement
Previous
Next Post »