ನವದೆಹಲಿ, ಮಾರ್ಚ್ 10: ಭಾರತದಲ್ಲಿ ತಯಾರಾದ 45 ಮಿಲಿಯನ್ ಕೋವಿಡ್ ಲಸಿಕೆಗಳನ್ನು ಪಾಕಿಸ್ತಾನ ಪಡೆದುಕೊಳ್ಳಲಿದೆ. ಭಾರತವು ಪಾಕಿಸ್ತಾನಕ್ಕೆ ನೇರವಾಗಿ ಲಸಿಕೆಗಳನ್ನು ಪೂರೈಸುತ್ತಿಲ್ಲ. ಯುನೈಟೆಡ್ 'ಗವಿ' ಅಲೈಯನ್ಸ್ ಅಡಿಯಲ್ಲಿ ಈ ಲಸಿಕೆಗಳ ಪೂರೈಕೆಯಾಗಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯಗಳ ಸಂಯುಕ್ತ ಕಾರ್ಯದರ್ಶಿ ಆಮೀರ್ ಅಶ್ರಫ್ ಖವಾಜಾ ಅವರು ಸಾರ್ವಜನಿಕ ಲೆಕ್ಕ ಸಮಿತಿಗೆ ಮಾಹಿತಿ ನೀಡಿದ್ದಾರೆ.
ಲಸಿಕೆ ಮೈತ್ರಿಕೂಟವಾದ 'ಗವಿ ಅಲೈಯನ್ಸ್', ಮಾರಕ ಹಾಗೂ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಗಳಿಂದ ಜಗತ್ತಿನ ಸುಮಾರು ಅರ್ಧದಷ್ಟು ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲು ನೆರವು ನೀಡುತ್ತಿದೆ. ಭಾರತದ ಸೆರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಒಟ್ಟು 45 ಮಿಲಿಯನ್ ಡೋಸ್ಗಳು ಪಾಕಿಸ್ತಾನಕ್ಕೆ ತಲುಪಲಿವೆ.
2020ರ ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದೊಂದಿಗೆ ಮಾಡಿಕೊಳ್ಳಲಾದ ಕೋವಿಡ್ ಲಸಿಕೆ ನೆರವು ಒದಗಿಸುವ ಗವಿ ಒಪ್ಪಂದಕ್ಕೆ ಅನುಗುಣವಾಗಿ ಈ ಲಸಿಕೆಗಳ ನೆರವು ನೀಡಲಾಗುತ್ತಿದೆ.
ಪಾಕಿಸ್ತಾನದ ಸಂಸದ ಮುಷಾಹಿದ್ ಹುಸೇನ್ ಸಯ್ಯದ್ ಅವರು, ಲಸಿಕೆಗಳು ನಮಗೆ ಎಲ್ಲಿಂದ ಬರಲಿದೆ ಎಂದು ಸಮಿತಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಖವಾಜಾ, 'ಭಾರತದಲ್ಲಿ ತಯಾರಾದ ಲಸಿಕೆಗಳನ್ನು, ಅಭಿವೃದ್ಧಿಶೀಲ ಮತ್ತು ಕಡಿಮೆ ಆದಾಯದ ದೇಶಗಳಿಗೆ ಸಹಾಯ ಒದಗಿಸುವ ಉದ್ದೇಶದ ಗವಿ ಒಪ್ಪಂದದ ಮೂಲಕ ಪಾಕಿಸ್ತಾನ ರಾಷ್ಟ್ರೀಯರಿಗೆ ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ.
ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು 65 ವರ್ಷ ದಾಟಿದ ಜನರಿಗೆ ಲಸಿಕೆ ಕಾರ್ಯಕ್ರಮದಲ್ಲಿ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
EmoticonEmoticon