ಯಲಹಂಕದ 4 ಕಡೆ ಕೋವಿಡ್ ಕ್ಲಸ್ಟರ್ ಕಂಟೈನ್ಮೆಂಟ್ ಝೋನ್ :ಎರಡು ಕಾಲೇಜುಗಳಿಗೆ 14 ದಿನ ರಜೆ

March 01, 2021

 


ಬೆಂಗಳೂರು ಯಲಹಂಕ ವಲಯದ ಎರಡು ಕಾಲೇಜು, ವಸತಿ ಸಮುಚ್ಚಯ ಹಾಗೂ ಪಿಜಿ ಸೇರಿ ನಾಲ್ಕು ಸ್ಥಳಗಳಲ್ಲಿ 33 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರದೇಶಗಳನ್ನು ಕ್ಲಸ್ಟರ್ ಕಂಟೈನ್ಮೆಂಟ್ ಝೋನ್​ ಎಂದು ಘೋಷಿಸಲಾಗಿದೆ. ಅಟ್ಟೂರು ಬಳಿಯ ಸಂಭ್ರಮ್, ಅಗ್ರಗಾಮಿ ಕಾಲೇಜು, ವೆನಿಜಿಯಾ ಅಪಾರ್ಟ್ಮೆಂಟ್​​​ನಲ್ಲಿ 28 ಮಂದಿ ಸೋಂಕಿಗೆ ಒಳಗಾಗಿದ್ದರು. 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕು ಹರಡದಂತೆ ನಿಗಾ ವಹಿಸಲಾಗಿದೆ.

14 ದಿನ ರಜೆ ಘೋಷಣೆ :

ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಯಲಹಂಕ ವಲಯದ ಸಂಭ್ರಮ್ ಕಾಲೇಜು ಹಾಗೂ ಅಗ್ರಗಾಮಿ ಕಾಲೇಜುಗಳಿಗೆ 14 ದಿನ ರಜೆ ನೀಡಲಾಗಿದ್ದು, ವೆನಿಜಿಯಾ ಅಪಾರ್ಟ್ಮೆಂಟ್ ಅನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತ ಅಶೋಕ್ ತಿಳಿಸಿದ್ದಾರೆ.

ಕೋವಿಡ್ ​ ಪರೀಕ್ಷೆ ಕಡ್ಡಾಯ :

ಹೊರ ರಾಜ್ಯದಿಂದ ಬರುವ ಎಲ್ಲಾ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದ್ದು, ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್, ಕಲ್ಯಾಣ ಮಂಟಪ ಸೇರಿದಂತೆ ಎಲ್ಲಾ ಆಹಾರ ತಯಾರಕರು ಹಾಗೂ ಊಟ ಬಡಿಸುವ ಸಿಬ್ಬಂದಿ ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಆರ್​​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.


Related Articles

Advertisement
Previous
Next Post »