ಪರೀಕ್ಷೆ ಇಲ್ಲದೇ ಮಕ್ಕಳು ಪಾಸಾ? ಕಾಲೇಜುಗಳಿಗೆ 15 ದಿನ ರಜೆನಾ? 'ಸುತ್ತೋಲೆ'ಯ ಅಸಲಿಯತ್ತೇನು?

March 14, 2021

 


ಬೆಂಗಳೂರು: ಕರೊನಾ ಎರಡನೆಯ ಅಲೆ ಶುರುವಾಗುತ್ತಿರುವ ಸುದ್ದಿಯಾಗುತ್ತಿದ್ದಂತೆಯೇ ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸುವುದು ಹೇಗಪ್ಪಾ ಎಂಬ ಚಿಂತೆ ಪಾಲಕರಿಗೆ ಶುರುವಾಗಿದೆ. ಕೆಲ ವಾರಗಳ ಹಿಂದೆ ಶುರುವಾಗಿರುವ ಶಾಲಾ- ಕಾಲೇಜುಗಳಿಗೆ ಹೇಗೋ ಧೈರ್ಯ ಮಾಡಿ ಮಕ್ಕಳನ್ನು ಕಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಮಹಾಮಾರಿಯ ಆರ್ಭಟ ಜೋರಾಗಿದೆ.

ಪಾಲಕರು ಹೀಗೆ ಭಯಪಡುತ್ತಿರುವ ನಡುವೆಯೇ ಕೆಲವು ಸಂದೇಶಗಳು, ಸರ್ಕಾರದ ಸುತ್ತೋಲೆಯಂತೆ ತೋರುವ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

1 ರಿಂದ 6ನೇ ಶಾಲೆಯ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಶೇರ್​ ಆಗುತ್ತಿದ್ದರೆ, ಕೆಲವು ಸಂದೇಶಗಳಲ್ಲಿ 1ರಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಎಂಬ ಸಂದೇಶ ಹರಿದಾಡುತ್ತಿವೆ.

ಇದರ ಮುಂದುವರೆದಿರುವ ಭಾಗವಾಗಿ ನಿನ್ನೆಯಿಂದ 15 ದಿನಗಳವರೆಗೆ ಕಾಲೇಜುಗಳಿಗೆ ರಜೆ, ಆದರೆ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂಬ ಸಂದೇಶ ಹರಿದಾಡುತ್ತಿದೆ. ಸಾಲದು ಎಂಬುದಕ್ಕೆ ಸರ್ಕಾರದ ಸುತ್ತೋಲೆಯನ್ನೇ ಹೋಲುವ ಸುತ್ತೋಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನು ನಂಬಿ ಅನೇಕ ವಿದ್ಯಾರ್ಥಿಗಳು ನಲಿದಾಡುತ್ತಿದ್ದರೆ, ಇದು ನಿಜವೋ, ಸುಳ್ಳೋ ಎನ್ನುವುದು ತಿಳಿಯದೇ ಹಲವರು ಕನ್​ಫ್ಯೂಸ್​ನಲ್ಲಿದ್ದಾರೆ.

ಅಸಲಿಗೆ ಇವ್ಯಾವುವೂ ನೈಜ ಸುದ್ದಿಗಳಲ್ಲ. ಪರೀಕ್ಷೆ ಇಲ್ಲದೇ ಪಾಸು ಎಂಬ ಸುದ್ದಿಯ ಕುರಿತಾಗಿ ಇದಾಗಲೇ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಸ್ಪಷ್ಟನೆ ನೀಡಿದ್ದು, ಇದು ಫೇಕ್​ ಸುದ್ದಿ, ಸರ್ಕಾರದಿಂದ ಇಂಥ ಆದೇಶ ಹೊರಟಿಲ್ಲ ಎಂದಿದ್ದಾರೆ. ಇದೀಗ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರದ ಸುತ್ತೋಲೆ ಹೋಲುವ ಸಂದೇಶದ ಕುರಿತು ಸ್ಪಷ್ಟನೆ ನೀಡಿದ್ದು, ಇದು ಅಸಲಿ ಸುತ್ತೋಲೆ ಅಲ್ಲ. ಸರ್ಕಾರದಿಂದ ಇಂಥ ಯಾವುದೇ ಆದೇಶ ಹೊರಟಿಲ್ಲ. ಇವುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ.


Related Articles

Advertisement
Previous
Next Post »