-->


Ghost Video - ನಗುವನಹಳ್ಳಿಯಲ್ಲಿ ದೆವ್ವದ ಕಾಟ? ಕಪ್ಪು ಛಾಯೆಯ ಓಡಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

 ಮಂಡ್ಯ: ಆ ಊರಿನ ಜನರಲ್ಲಿ ಇದೀಗ ದೆವ್ವದ ಆತಂಕ ಮನೆ ಮಾಡಿದೆ. ತೋಟದ ಮನೆಯೊಂದರಲ್ಲಿನ ಸಿ.ಸಿ ಟಿವಿಯ ದೃಶ್ಯದಲ್ಲಿ ದೆವ್ವವೊಂದು ಓಡಾಡ್ತಿದೆ ಅನ್ನೋ ವಿಡಿಯೋವೊಂದು ವೈರಲ್ ಆಗಿದೆ. ಇದ್ರಿಂದ ಆ ಜನರು ಭೀತಿಗೊಂಡಿದ್ದಾರೆ. ರಸ್ತೆ ಪಕ್ಕದಲ್ಲೇ ಆ ತೋಟದ ಮನೆಯನ್ನು ಮನೆ ಮಾಲೀಕ ಖಾಲಿ ಮಾಡಿದರೆ, ಜನರು ಆ ತೋಟದ ಮನೆಯ ರಸ್ತೆಯಲ್ಲಿ ತಿರುಗಾಡಲು ಭಯಪಡುತ್ತಿದ್ದಾರೆ.


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನ ಹಳ್ಳಿ ಗ್ರಾಮದಲ್ಲಿ ಇದೀಗ ದೆವ್ವದ ಅತಂಕ ಮನೆ ಮಾಡಿದೆ. ಗ್ರಾಮದ ಗೋಪಾಲ್ ಎಂಬುವರ ತೋಟದ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಜನವರಿ 31 ರಂದು ದೆವ್ವದ ಓಡಾಟದ ದೃಶ್ಯವೊಂದು ಸೆರೆಯಾಗಿದೆ‌. ಆ ವಿಡಿಯೋದಲ್ಲಿ ತೋಟದಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಹಿಂದೆ ಸಂಜೆ ಸುಮಾರು 6:46 ಸೆಕೆಂಡಿಗೆ ಕಪ್ಪು ಬಣ್ಣದ ಆಕೃತಿಯೊಂದು ಓಡಾಡ್ತಿರೋದು ಕಾಣ ಬರ್ತಿದೆ. ಇದು ದೆವ್ವವೆಂದು ಹೇಳಲಾಗ್ತಿದ್ದು, ಊರ ಜನರು ಈ ಸಿಸಿ ಟಿವಿಯ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ‌. ಅಲ್ಲದೆ, ಇದೀಗ ಆ ತೋಟದ ಮನೆಯ ಕಡೆ ಕೂಡ ಜನರು ಓಡಾಡಲು ಭಯ ಪಡ್ತಿದ್ದಾರೆ‌. ಇನ್ನು ಮನೆಯ ಮನೆಯ ಮಾಲೀಕ ತೋಟದ ಮನೆಗೆ ಬೀಗ ಹಾಕಿ ಬೇರೆ ಊರಿನ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಆತ್ಮಹತ್ಯೆ, ಸಮಾಧಿ, ಹೆಜ್ಜೆ ಸಪ್ಪಳ, ಕಿರುಚುವ ಶಬ್ದ..

ನಗುವನಹಳ್ಳಿ ಗ್ರಾಮದ ಗೋಪಾಲ್ ಎಂಬುವರು ಕಳೆದ 30 ವರ್ಷಗಳಿಂದ ಊರ ಹೊರಗಿನ ಈ ತೋಟ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇಲ್ಲಿರೋ 10 ಎಕರೆ ತೋಟ ಮತ್ತು ಜಮೀನಿನಲ್ಲಿ ರಾಸುಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಈ ತೋಟದ ಸಮೀಪದ ಕಾಲುವೆಯಲ್ಲಿ ಓರ್ವ ಸತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ತೋಟದಲ್ಲಿ ಆತ್ಮಹತ್ಯೆ ‌ಮಾಡಿಕೊಂಡಿದ್ದ ಎನ್ನಲಾಗಿದೆ‌. ಅಲ್ಲದೆ, ಇವರ ಈ ತೋಟದಲ್ಲಿ ಅವರ ಕುಟುಂಬಕ್ಕೆ ಸೇರಿದ ಇಬ್ಬರು ಹಿರಿಯರನ್ನು ಮಣ್ಣು ಮಾಡಿ ಸಮಾಧಿ ನಿರ್ಮಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಬಳಿಕ ಇವರಿಗೆ ಸಮಸ್ಯೆಗಳು ಹೆಚ್ಚಾಗಿದ್ದು, ಮನೆಯವರು ಸೇರಿದಂತೆ ಕೆಲಸಗಾರರು ಭಯಗೊಂಡಿದ್ದರು‌. ಮನೆಯಲ್ಲಿ ಇದ್ದಕ್ಕಿದ್ದಂತೆ ಕಿರುಚಾಡುವ ಶಬ್ದ, ನರಳುವ ಶಬ್ದ ರಾತ್ರಿ ಹೊತ್ತು ಕೇಳಿಬರುತ್ತಿದ್ದರೆ, ಹಗಲಿನ‌ ವೇಳೆ ಯಾರೋ ಹಿಂಬಾಲಿಸುವಂತೆ, ಗಿಡಗಳು ಅಲುಗಾಡಿದ ಹಾಗೆ ಮತ್ತು ಹೆಜ್ಜೆ ಸಪ್ಪಳ ಕೇಳಿಬರುತ್ತಿದ್ದು ಇದು ಮತ್ತಷ್ಟು ಆತಂಕ ಮೂಡಿಸಿತ್ತು. ಇದ್ರಿಂದ ಹೆದರಿದ ಕುಟುಂವದವರು ಮೊದಲು ಯಾರೋ ಕಿಡಿಗೇಡಿಗಳ ಕೆಲಸ ಎಂದು ಭಾವಿಸಿದ್ದರು. ಸಮಸ್ಯೆ ಹೆಚ್ಚಾದಾಗ ತೋಟದ ಮನೆ ಬಿಟ್ಟು ಕಾವಲಿಗೆ ತೋಟ ಮತ್ತು ಮನೆಗೆ ಐದಾರು ಕಡೆ ಸಿಸಿಟಿವಿ ಅಳವಡಿಸಿದ್ರು‌.


ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯಪಡೆ ರಚನೆ

ಸಿಸಿಟಿವಿ ವಿಡಿಯೋ:

ಜ. 31 ರಂದು ಸಿಸಿ ಟಿವಿಯಲ್ಲಿ ಒಂದು ಕಪ್ಪಗಿನ ಪಾರದರ್ಶಕ ರೀತಿಯ ಆಕೃತಿಯೊಂದು ಓಡಾಡುತ್ತಿರೋ ದೃಶ್ಯ ದಾಖಲಾಗಿದೆ. ಆ ದೃಶ್ಯ ನೋಡಿದ ಗ್ರಾಮವರು ಇದು ದೆವ್ವವೆಂದು ಹೇಳುತ್ತಿದ್ದಾರೆ. ಆದ್ರೆ ಆ ತಾಲೂಕಿನ ಪತ್ರಕರ್ತನೋರ್ವ ಈ ಭಯದ ವದಂತಿ ಹೋಗಲಾಡಿಸಲು ಸಿದ್ದನಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದೆಲ್ಲ ಸುಳ್ಳು. ನಾನು ರಾತ್ರಿ ಆ ದೆವ್ವವಿರೋ ತೋಟದ ಮನೆಯಲ್ಲಿ ಮಲಗಲು ಸಿದ್ದನಿರೋದಾಗಿ ಹೇಳಿದ್ದು ಇದೀಗ ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.

ಯತ್ನಾಳ್ ಹಿಂದುತ್ವವಾದಿ ಎಂಬುದಕ್ಕೆ ಖುಷಿ ಇದೆ, ಆದರೂ ಪಕ್ಷದ ಶಿಸ್ತಿನ ಒಳಗೆ ಇದ್ದರೆ ಒಳ್ಳೆಯದು; ಈಶ್ವರಪ್ಪ

ಒಟ್ಟಾರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ನಡೆದಿರುವ ಈ ದೆವ್ವದ ಓಡಾಟ ಪ್ರಕರಣ ಇದೀಗ ಗ್ರಾಮದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಒಂದೆಡೆ ಊರ ಜನರು ಓಡಾಡಲು ಭಯ ಪಡ್ತಿದ್ದು, ಮತ್ತೊಂದು ಕಡೆ ಮನೆಯ ಮಾಲೀಕ ಊರಿನ ಬೇರೆ ಮನೆಯಲ್ಲಿ ವಾಸ ಮಾಡ್ತಿರೋದು ಇಲ್ಲಿನ ಜನರನ್ನ ಮತ್ತಷ್ಟು ಆತಂಕ ಮೂಡಿಸಿದೆ. ಆಧುನಿಕ ಯುಗದಲ್ಲಿ ಸ್ಥಳೀಯರು ಆ ವಿಡಿಯೋದ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಒಂದು ಕಡೆ ದೆವ್ವ ನಂಬದ ಜನ, ಮತ್ತೊಂದು ಕಡೆ ದೆವ್ವದ ಭೀತಿಯ ಆತಂಕದ ಜನರಿಗೆ ಇದೀಗ ಆ ವಿಡಿಯೋ ಮತ್ತಷ್ಟು ಕುತೂಹಲ ಮತ್ತು ಆತಂಕಕ್ಕೆ ಎಡೆ ಮಾಡಿರುವುದು ಸುಳ್ಳಲ್ಲ.

ವರದಿ: ರಾಘವೇಂದ್ರ ಗಂಜಾಮ್
 

0 Response to Ghost Video - ನಗುವನಹಳ್ಳಿಯಲ್ಲಿ ದೆವ್ವದ ಕಾಟ? ಕಪ್ಪು ಛಾಯೆಯ ಓಡಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

Post a Comment

Advertise