ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ನಾಳೆ (ಬುಧವಾರ) ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಅರ್ಧ ವೇತನ, ಅಧಿಕಾರಿಗಳಿಂದ ನಿಲ್ಲದ ಕಿರುಕುಳ, ಬಗೆಹರಿಯದ ರಜೆಗಳ ಸಮಸ್ಯೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.
ಕಳೆದ ಡಿಸೆಂಬರ್ನಿಂದ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಮುಷ್ಕರದ ನಂತರ ನೌಕರರ ಮೇಲೆ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ನಾವು ನಾಳೆ ಸಾಂಕೇತಿಕವಾಗಿ ಒಂದು ದಿನ ಮುಷ್ಕರ ಮಾಡಲು ಮುಂದಾಗಿರುವುದಾಗಿ ನೌಕರರು ಹೇಳಿದ್ದಾರೆ.
ಆದರೆ ಈ ಪ್ರತಿಭಟನೆಯಿಂದ ನಾಳೆ ಬಸ್ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ತಿಳಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಷ್ಟದಿಂದ ವೇತನದಲ್ಲಿ ಕೊಂಚ ಏರುಪೇರಾಗಿತ್ತು. ಈಗ ಸಾರಿಗೆ ನೌಕರರ ವೇತನವನ್ನು ನೀಡಲಾಗುವುದು. ಇದಾಗಲೇ ನೌಕರರು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ಪೈಕಿ ಕೆಲವು ಕಾರ್ಯಸಾಧು ಬೇಡಿಕೆಗಳನ್ನು ಈಡೇರಿಸಿದೆ. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಿದೆ ಎಂದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಆರೋಗ್ಯ ವಿಮೆ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ನೌಕರರಿಗೆ 30 ಲಕ್ಷ ಪರಿಹಾರ ನೀಡಬೇಕು, ತರಬೇತಿ ಅವಧಿ ಕಡಿತ, ಅಧಿಕಾರಿಗಳ ಕಿರುಕುಳ, ಕರ್ತವ್ಯದ ಅವಧಿ ಕಡಿತ ಮಾವುದೂ ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ್ದ ಪ್ರತಿಭಟನೆಗೆ ಸರ್ಕಾರ ಮೂರು ತಿಂಗಳ ಕಾಲವಕಾಶ ಕೇಳಿತ್ತು. ಈಗಾಗಲೇ ಎರಡು ತಿಂಗಳು ಮುಗಿದಿದ್ದು, ಸರ್ಕಾರ ಯಾವುದೇ ಬೇಡಿಕೆ ಈಡೇರಿಸಿಲ್ಲ ಎನ್ನುವುದು ನೌಕರರ ಆರೋಪ.
EmoticonEmoticon