ಶಿಕ್ಷಕರ ಕೊರತೆ ತುಂಬಲು ಇದೆ ಉಪಾಯ

February 11, 2021

 


ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಶೇ 50ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಈ ಭಾಗದ ಕೆಲವು ಶಾಸಕರು ಧ್ವನಿ ಎತ್ತಿದ್ದಾರೆ. ಕಳೆದೆರಡು ಬಾರಿ ನೇಮಕಾತಿ ಪರೀಕ್ಷೆ ನಡೆಸಿದರೂ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆಗಿಲ್ಲ. ಇಲಾಖೆಯು ಮೊರೆ ಹೋದ ಅವೈಜ್ಞಾನಿಕ ಪರೀಕ್ಷಾ ನೀತಿ ಇದಕ್ಕೆ ಕಾರಣ. ಇದನ್ನು ತೆಗೆದುಹಾಕುವಂತೆ ಶಾಸಕರು ಶಿಕ್ಷಣ ಸಚಿವರನ್ನು ವಿನಂತಿಸಿಕೊಂಡಿದ್ದಾರೆ. ಇದೇ ರೀತಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅವರು ಎರಡು, ಮೂರನೇ ಸುತ್ತಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೇ ಉಪಾಯವನ್ನು ಇಲಾಖೆಯೂ ಏಕೆ ಮಾಡಬಾರದು?

ಕಳೆದ ಬಾರಿ ಪರೀಕ್ಷೆ ಬರೆದು ಆಯ್ಕೆಯಾಗದೆ ಉಳಿದಿರುವ ಅಭ್ಯರ್ಥಿ ಗಳಿಗೆ ಅಂಕಗಳ‌ ಸಡಿಲಿಕೆ ನೀಡಿ ಅವರನ್ನು ನೇಮಕ ಮಾಡಿಕೊಳ್ಳಬಹುದಲ್ಲವೇ?

ಕೆಪಿಎಸ್‌ಸಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಒಂದೇ ರಾಜ್ಯದ ಅಂಗಗಳು. ಇವೆರಡರ ನಡುವೆ ತಾರತಮ್ಯವೇಕೆ? ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸೂಕ್ತ ಶಿಕ್ಷಣ ದೊರೆಯದೆ ಈ ಭಾಗದ ಮಕ್ಕಳು ಶೋಷಣೆಗೆ ಒಳ ಗಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಕಣ್ಣು ತೆರೆಯಲಿ. ಶೀಘ್ರವಾಗಿ ಎರಡನೇ ಸುತ್ತಿನಲ್ಲಿ ಶಿಕ್ಷಕರನ್ನು ತುಂಬಿಕೊಳ್ಳಲಿ.

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ


Related Articles

Advertisement
Previous
Next Post »