ಶಾಲೆಗೆ ರಸ್ತೆ ನಿರ್ಮಿಸಿದ ಮಕ್ಕಳು, ಸ್ನೇಹಿತನ ಅಪಘಾತಕ್ಕೆ ರಿವೇಂಜ್..!

February 21, 2021

 


 ಗುಂಡಿ ಬಿದ್ದ ರಸ್ತೆಗಳು, ಅದೇ ಗುಂಡಿಗೆ ಬಿದ್ದು ಗಾಯಗೊಂಡ ಸ್ನೇಹಿತ. ಅರೆ ಎಷ್ಟು ದಿನ ಅಂತಾ ಇದನ್ನೆಲ್ಲಾ ನೋಡಿ ಸುಮ್ಮನೆ ಇರೋದು ಹೇಳಿ. ಹೌದು, ಹೀಗೆ ಯೋಚಿಸಿದ್ದು ಒಡಿಶಾ ರಾಜ್ಯದ ಮಲ್ಕಂಗಿರಿ ಸಮೀಪದ ಹಳ್ಳಿಯೊಂದರ ಮಕ್ಕಳು. ರಾಜ್ಯದಲ್ಲಿ ಅಭಿವೃದ್ಧಿಯ ಹೆಸರು ರಾರಾಜಿಸಿದರು, ಒಡಿಶಾದ ಎಷ್ಟೋ ಹಳ್ಳಿಗಳಿಗೆ ಇಂದಿಗೂ ಸರಿಯಾದ ರಸ್ತೆಗಳೇ ಇಲ್ಲ.

ಇದೇ ರೀತಿ ಮಲ್ಕಂಗಿರಿ ಜಿಲ್ಲೆಯ ಪದಲ್‌ಪುತ್ ಶಾಲೆಯ ಮಕ್ಕಳಿಗೆ ರಸ್ತೆ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿತ್ತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಶಾಲೆಗಳು ಇತ್ತೀಚೆಗೆ ತೆರೆದಿದ್ದವು. ಹೀಗೆ ಶಾಲೆ ಪುನಾರಂಭವಾದ ಹಿನ್ನೆಲೆಯಲ್ಲಿ ಅದೇ ಮುರುಕಲು ರಸ್ತೆ ಬಳಸಿ ಸುಮಾರು 5 ಕಿಲೋ ಮೀಟರ್ ದೂರಕ್ಕೆ ತೆರಳಬೇಕಿತ್ತು. ಹೀಗೆ ತೆರಳುವಾಗ ಅಪಘಾತಗಳು ಸಂಭವಿಸುತ್ತಿದ್ದವು. ನಡೆದು ಹೋಗುವುದಂತೂ ಅಕ್ಷರಶಃ ನರಕವಾಗಿತ್ತು.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಮಕ್ಕಳು, ಇದು ಹೀಗೆ ಬಿಟ್ಟರೆ ಬಗೆಹರಿಯದು ಅಂತಾ ಪುಟಾಣಿ ಕೈಗಳಲ್ಲಿ ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ರಿಪೇರಿ ಮಾಡೇಬಿಟ್ಟರು.


ಸ್ನೇಹಿತ ಬಿದ್ದಿದ್ದಕ್ಕೆ ರಿವೇಂಜ್..!


ಇಷ್ಟುದಿನ ಹೇಗೋ ಸಹಿಸಿಕೊಂಡು ಅದೇ ಹಳೇ ರಸ್ತೆಯ ಮೇಲೆ ನಡೆದಾಡುತ್ತಿದ್ದ ಈ ಮಕ್ಕಳು ಏಕಾಏಕಿ ರಸ್ತೆ ರಿಪೇರಿ ಮಾಡಲು ನುಗ್ಗಿದ್ದರ ಹಿಂದೆ ದೊಡ್ಡಕಥೆ ಇದೆ. ಅಂದಹಾಗೆ ಈ ಶಾಲಾ ವಿದ್ಯಾರ್ಥಿಗಳ ಸ್ನೇಹಿತ ಸೈಕಲ್ ಮೇಲೆ ಹೋಗುವಾಗ, ಇದೇ ರಸ್ತೆ ಗುಂಡಿಗೆ ಬಿದ್ದಿದ್ದ. ಬಾಲಕನಿಗೆ ಗಂಭೀರ ಗಾಯವಾಗಿತ್ತು. ಇದು ಮಕ್ಕಳಿಗೆ ಶಾಕ್ ನೀಡುವ ಜೊತೆಗೆ, ರಸ್ತೆ ಗುಂಡಿಗೆ ಹೇಗಾದರೂ ಒಂದು ಗತಿ ಕಾಣಿಸಬೇಕು ಅಂತಾ ತೀರ್ಮಾನಿಸಿದ್ದರು. ಅದರಂತೆ ಕೇಲವೇ ದಿನಗಳಲ್ಲಿ ಸುಮಾರು 2 ಕಿಲೋ ಮೀಟರ್ ವಿಸ್ತಿರ್ಣದ ರಸ್ತೆಯನ್ನ ರಿಪೇರಿ ಮಾಡಿದ್ದಾರೆ.

ಮಳೆ ಬಂತು ಎಂದರೆ ನರಕ..!


ಒಡಿಶಾದ ಮಲ್ಕಂಗಿರಿಯಲ್ಲಿ ಮಳೆ ಬಂತೆಂದರೆ ನರಕ ದರ್ಶನವಾಗುತ್ತದೆ. ಸರಿಯಾದ ರಸ್ತೆ ಇಲ್ಲದೆ, ಮಣ್ಣಿನ ಮುದ್ದೆಯಾದ ರಸ್ತೆಗಳ ಮೇಲೆ ಹೋಗಬೇಕು ಅಂದರೆ ಜೀವ ಕೈಯಲಿಡಿದು ಸಾಗಬೇಕು. ಇನ್ನೇನು ಮಳೆಗಾಲ ಆರಂಭ ಆಗಿಬಿಡುತ್ತದೆ ಅಂತಾ ಲೆಕ್ಕಾಚಾರ ಹಾಕಿದ್ದ ವಿದ್ಯಾರ್ಥಿಗಳು ರಸ್ತೆ ರಿಪೇರಿಗೆ ಮುಂದಾಗಿದ್ದರು. ಇದಕ್ಕೆ ಸ್ಥಳೀಯ ಎನ್‌ಜಿಒ ಕೂಡ ಸಾಥ್ ನೀಡಿತ್ತು. ಮಕ್ಕಳು ಒಗ್ಗಟ್ಟಿನಿಂದ, ಶ್ರಮದಾನ ಮಾಡಿ ರಸ್ತೆಯನ್ನ ರಿಪೇರಿ ಮಾಡಿದ್ದಾರೆ. ಈ ಡಕೋಟ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿ ಶಾಲೆಗೆ ಓಡಾಡಲು ಅನುಕೂಲ ಮಾಡ್ಕೊಂಡಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಹಣ ಇಲ್ವಾ..?ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಲವು ಬಾರಿ ರಸ್ತೆ ನಿರ್ಮಾಣದ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಬಗ್ಗೆ ಕೇಳಿ ಕೇಳಿ ಸಾಕಾಗಿ ಸುಮ್ಮನಾಗಿದ್ದರು ಗ್ರಾಮಸ್ಥರು. ಅಂತೂ ಇದಕ್ಕೆಲ್ಲಾ ಒಂದು ಗತಿ ಕಾಣಿಸುವ ಮನಸ್ಸು ಮಾಡಿದ್ದರು. ಆದರೆ ಅಪ್ಪ, ಅಮ್ಮನ ಕೈಯಲ್ಲಿ ಆಗದ ಕೆಲಸವನ್ನೂ ಪುಟಾಣಿ ಸೈನ್ಯ ಮಾಡಿ ತೋರಿಸಿದೆ. ಶಾಲೆಗೆ ಹೋಗಲು ಬೇಕಾದ ರಸ್ತೆಯನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಮತ್ತೆ ರಸ್ತೆ ಸಮಸ್ಯೆ ಬಾರದೇ ಇರಲಿ ದೇವರೆ ಅಂತಾ ಬೇಡಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳ ವಿಲೀನ..!ಒಡಿಶಾದಲ್ಲೂ ಕಡಿಮೆ ಸಂಖ್ಯೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮತ್ತೊಂದು ಶಾಲೆಯ ಜೊತೆಗೆ ವಿಲೀನ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಮಲ್ಕಂಗಿರಿ ಜಿಲ್ಲೆಯ ಪದಲ್‌ಪುತ್ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿದಿತ್ತು. ಹೀಗಾಗಿ ತಲಕತಾ ಎಂಬ ಮತ್ತೊಂದು ಸಮೀಪದ ಶಾಲೆಯಲ್ಲಿ ವಿಲೀನ ಮಾಡಲಾಗಿತ್ತು. ಹೊಸ ಶಾಲೆಗೆ ತೆರಳಲು ಮಕ್ಕಳು ಮತ್ತೊಂದಿಷ್ಟು ದೂರಕ್ಕೆ ಪ್ರಯಾಣ ಮಾಡಬೇಕಿತ್ತು, ಆದರೆ ರಸ್ತೆ ಮಾತ್ರ ಅಸ್ತವ್ಯಸ್ತ. ಪರಿಸ್ಥಿತಿ ಹೀಗಿದ್ದರೂ ಓದಲೇಬೇಕೆಂಬ ಛಲ ಈ ಮಕ್ಕಳ ಕೈಯಲ್ಲಿ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದೆ.


Related Articles

Advertisement
Previous
Next Post »