ಚನ್ನರಾಯಪಟ್ಟಣ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ವರ್ತುಲ ರಸ್ತೆಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಶಿಕ್ಷಕರೊಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಕರಿಮಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಂಗಾಧರ್(46) ಮೃತ ವ್ಯಕ್ತಿ.
ಮೂಲ ಅರಕಲಗೂಡಿನವರಾದ ಶಿಕ್ಷಕರು, 20 ವರ್ಷದಿಂದ ಚನ್ನರಾಯಪಟ್ಟಣದಲ್ಲಿ ನೆಲೆಸಿದ್ದರು. ಸೋಮವಾರ ಬೆಳಗ್ಗೆ ಸಿಆರ್ಪಿ ಮಮತಾ ಅವರೊಂದಿಗೆ ಶಾಲೆಗೆ ತೆರಳುವಾಗ ಮಾಳೆಕೊಪ್ಪಲು ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಕ್ರಾಸ್ ಮಾಡುವಾಗ ಹಾಸನ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡಿದಿದೆ. ಈ ವೇಳೆ ಶಿಕ್ಷಕ ಗಂಗಾಧರ್ ಹೆದ್ದಾರಿಗೆ ಉರುಳಿ ಬಿದ್ದು, ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸಿಆರ್ಪಿ ಮಮತಾ ಅವರ ಕಾಲು ಮುರಿದಿದೆ.
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಶಿಕ್ಷಕ ಗಂಗಾಧರ್ಗೆ ಪತ್ನಿ ಹಾಗೂ ಪುತ್ರಿ ಇದ್ದು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಪುತ್ರಿ ಮೇಘನಾ ವಿವಾಹ ನಿಶ್ಚಯವಾಗಿತ್ತು. ಮಾ.5ರಂದು ವಿವಾಹ ಮಹೋತ್ಸವ ಇಟ್ಟುಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
EmoticonEmoticon