ಸೈರೋ: ಸುಮಾರು 2 ಸಾವಿರ ವರ್ಷದಷ್ಟು ಹಳೆಯದಾಗಿರುವ ಮಮ್ಮಿಯೊಂದು ಈಜಿಪ್ಟ್ನಲ್ಲಿ ಸಿಕ್ಕಿದೆ. ಹೀಗೆ ಶತಮಾನದಷ್ಟು ಹಳೆಯದಾಗಿರುವ ಪಳೆಯುಳಿಕೆ ಸಿಗುವುದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ಅಚ್ಚರಿಯ ವಿಷಯ ಎಂದರೆ ಈ ಮಮ್ಮಿಯ ನಾಲಿಗೆಯು ಚಿನ್ನದಿಂದ ಮಾಡಲಾಗಿದೆ!
ಈಜಿಪ್ಟ್ನ ಟ್ಯಾಪೋಸಿರಿಸ್ ಮಗ್ನಾ ಸಮಾಧಿ ಸ್ಥಳದಲ್ಲಿ ಪುರಾತತ್ವಜ್ಞರಿಗೆ ಇಂಥದ್ದೊಂದು ವಿಶೇಷವಾಗಿರುವ ಮಮ್ಮಿ ಸಿಕ್ಕಿದೆ. ಹತ್ತು ವರ್ಷಗಳಿಂದ ಮಮ್ಮಿಯ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟೊ ಡೋಮಿಂಗೋ ವಿಶ್ವವಿದ್ಯಾಲಯ ಇಲ್ಲಿ ಉತ್ಖನನ ಕೆಲಸ ಕೈಗೊಂಡಿದ್ದು, ಈ ಸಂದರ್ಭ ಇದು ಲಭ್ಯವಾಗಿದೆ. ಈ ಹಿಂದೆ ಇದೇ ತಂಡವು ಟ್ಯಾಪೋಸಿರಿಸ್ ಮ್ಯಾಗ್ನಾ ದೇವಾಲಯದ ಒಳಗೆ ಹಲವು ನಾಣ್ಯಗಳನ್ನು ಪತ್ತೆಹಚ್ಚಿತ್ತು.
ಚಿನ್ನದ ನಾಲಗೆಯೊಂದಿಗೆ ಇದ್ದ ಈ ಅಸ್ಥಿಪಂಜರವನ್ನು ಸಂರಕ್ಷಿಸಿಡಲಾಗಿದೆ.
ಅಷ್ಟಕ್ಕೂ ಈ ಚಿನ್ನದ ನಾಲಿಗೆಯನ್ನು ಮಮ್ಮಿಗೆ ಅಳವಡಿಸಿರುವ ಕಾರಣ ಏನೆಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ವ್ಯಕ್ತಿ ಮೃತಪಟ್ಟ ನಂತರ ಚಿನ್ನದ ನಾಲಗೆಯನ್ನು ಹಾಕಿದರೆ ಸತ್ತ ನಂತರವೂ ಆ ವ್ಯಕ್ತಿ ಮಾತನಾಡುತ್ತಾರೆ ಎಂಬ ನಂಬಿಕೆ ಈಜಿಪ್ಟ್ ಜನರಲ್ಲಿ ಇತ್ತಂತೆ. ಇದೇ ಕಾರಣಕ್ಕೆ ಹೀಗೆ ನಾಲಿಗೆ ಇಡಲಾಗಿದೆ ಎಂದು ಈಜಿಪ್ಟ್ ಪ್ರವಾಸೋದ್ಯಮ ಹಾಗೂ ಪುರಾತತ್ವ ಸಚಿವಾಲಯ ತಿಳಿಸಿದೆ.
ಈ ಮಮ್ಮಿಯ ಜತೆಗೇನೇ ಹಲವು ಗೋರಿಗಳಲ್ಲಿ ಮಮ್ಮಿಗಳು ಕೂಡ ದೊರೆತಿವೆ. ದೇಹದ ಇನ್ನಿತರ ಅಂಗಗಳು ನಾಶವಾಗಿದ್ದರೂ, ಮುಖಗಳನ್ನು ಸಂರಕ್ಷಣೆ ಮಾಡಲಾಗಿದೆ. ವ್ಯಕ್ತಿ ಹೇಗಿದ್ದ ಎಂಬುದರ ಗುರುತು ಪತ್ತೆಗೆ ಇದು ಅನುಕೂಲ ಮಾಡಿಕೊಟ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ.
EmoticonEmoticon