ಸದನವನ್ನು ಮುಂದೂಡಿ ಎಲ್ಲರೂ ಪಿಕ್‍ನಿಕ್‍ ಹೋಗೋಣ ಎಂದ ಸಿದ್ದರಾಮಯ್ಯ

February 04, 2021
Thursday, February 4, 2021

 


ಬೆಂಗಳೂರು, ಫೆ. 4: 'ಅಧಿವೇಶನ ನಡೆಯುವ ಸಂದರ್ಭದಲ್ಲಿ ಸದನಕ್ಕೆ ಬಂದು ಕೂರುವ ವ್ಯವದಾನವೂ ಇಲ್ಲದೇ ಹೋದರೆ ಸಚಿವರು ಮತ್ತು ಶಾಸಕರಾಗಿ ಏಕೆ ಆಯ್ಕೆಯಾಗಬೇಕು' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವದ ಮೇಲೆ ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ಸದನ ಕಲಾಪದಲ್ಲಿ ಸಚಿವರು, ಅಧಿಕಾರಿಗಳು ಹಾಗೂ ಶಾಸಕರು ಇಲ್ಲದೆ ಹೋದರೆ ಸದಸ್ಯರು ಯಾರಿಗಾಗಿ ಮತ್ತು ಏಕೆ ಮಾತನಾಡಬೇಕೆಂದು ಕಿಡಿಕಾರಿದರು.

ಈ ಹಿಂದೆ ನಾನು ಸ್ಪೀಕರ್ ಆಗಿದ್ದ ವೇಳೆ ಸದಸ್ಯರ ಹಾಜರಿ ಪುಸ್ತಕ ತರಿಸಿ ಪರಿಶೀಲಿಸಿ ಅವರು ಮನೆಯಲ್ಲಿ ಇಲ್ಲದೆ, ಸದನದಲ್ಲಿ ಇಲ್ಲದಿದ್ದರೆ ಯಾರ ಮನೆಯಲ್ಲಿ ಇದ್ದಾರೆ ಎಂದು ಹುಡುಕಿ ಎಂದು ಆಯಾ ಪಕ್ಷಗಳ ಸಚೇತಕರಿಗೆ ಸೂಚನೆ ನೀಡುತ್ತಿದ್ದೆ ಎಂದು ರಮೇಶ್ ಕುಮಾರ್ ತಿಳಿಸಿದರು.

'ನೀವು (ಕಾಗೇರಿ ಅವರನ್ನು ಕುರಿತು) ಸ್ಪೀಕರ್ ಸ್ಥಾನಕ್ಕೆ ಬಂದ ಆರಂಭದಲ್ಲಿ ಪೂರ್ಣ ಚಂದ್ರನಂತೆ ಇದ್ದಿರಿ. ಇವಾಗ ಅಮಾವಾಸ್ಯೆ ಹತ್ತಿರ ಬಂದ ಚಂದ್ರನಂತೆ ಆಗಿದ್ದೀರಿ' ಎಂದು ಮರುಕ ವ್ಯಕ್ತಪಡಿಸಿದ ರಮೇಶ್ ಕುಮಾರ್, ಸಚಿವರು, ಅಧಿಕಾರಿಗಳು ಹಾಗೂ ಶಾಸಕರು ಸದನಕ್ಕೆ ಹಾಜರಾಗುವಂತೆ ಪ್ರಯತ್ನ ನಡೆಸಬೇಕು' ಎಂದು ಸಲಹೆ ಮಾಡಿದರು.

'ಸಂಪುಟ ದರ್ಜೆಯ ಸಚಿವರಿಗೆ ಅನುಭವ ಇರಬೇಕು, ನಿಯಮಾವಳಿಗಳ ಬಗ್ಗೆ ಮಾಹಿತಿ ಇರಬೇಕು. ಆದರೆ, ನಮ್ಮಲ್ಲಿ ಎಲ್ಲರೂ ಸಂಪುಟ ಸಚಿವರೇ? ಈ ಸಂಪುಟ ದರ್ಜೆ ಸಚಿವರು ಗ್ರಂಥಾಲಯಕ್ಕೂ ಹೋಗುವುದಿಲ್ಲ, ಇಲಾಖಾ ಮಾಹಿತಿಯೂ ಹೊಂದಿರುವುದಿಲ್ಲ, ನಿಯಮಾವಳಿಯೂ ತಿಳಿದಿಲ್ಲ, ಸಂವಿಧಾನ, ನಿಯಮಾವಳಿಗಳ ಅರಿವೂ ಇವರಿಗೆ ಇರುವುದಿಲ್ಲ' ಎಂದು ರಮೇಶ್ ಕುಮಾರ್ ಟೀಕಿಸಿದರು.

ಅನಿರ್ದಿಷ್ಟಾವಧಿಗೆ ಮುಂದೂಡಿ: ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 'ಸದನದಲ್ಲಿ ಸಚಿವರು ಮತ್ತು ಅಧಿಕಾರಿಗಳು ಹಾಜರಿರಬೇಕು. ಆದರೆ, ಕಾರಜೋಳ ಅವರನ್ನು ಹೊರತುಪಡಿಸಿದರೆ ಉಳಿದ ಸಚಿವರು ಇಲ್ಲ. ಅಧಿಕಾರಿಗಳ ಗ್ಯಾಲರಿಯೂ ಖಾಲಿಯಾಗಿದೆ. ಹೀಗಾದರೆ ಇವರೆಲ್ಲ ಏಕೆ ಸಚಿವರಾಗುತ್ತಾರೆ, ಇದೇನು ಹುಡುಗಾಟವೇ?' ಎಂದು ವಾಗ್ದಾಳಿ ನಡೆಸಿದರು.

'ಕಾರಜೋಳ ಅವರೇ ನೀವೊಬ್ಬರು ಇದ್ದರೆ ಎಲ್ಲರೂ ಇದ್ದ ಹಾಗಲ್ಲ, ನೀವೊಬ್ಬರೇ ಎಲ್ಲ ಇಲಾಖೆ ನಿರ್ವಹಣೆ ಮಾಡಲು, ಎಲ್ಲ ಸದಸ್ಯರ ಮಾತುಗಳನ್ನು ನೀವು ಕೇಳಿಸಿಕೊಂಡು ಎಲ್ಲ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯವೇ? ಸ್ಪೀಕರ್ ಅವರೇ ಕೂಡಲೇ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಲ್ಲರೂ ಎಲ್ಲಾದರೂ ಪಿಕ್‍ನಿಕ್‍ ಹೋಗೊಣ' ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 'ಸಚಿವರು ಸದನಕ್ಕೆ ಬಂದರೆ ಅವರ ಕೊಠಡಿಗಳಲ್ಲಿರುವ ಶಾಸಕರೂ, ಅಧಿಕಾರಿಗಳು ಸದನಕ್ಕೆ ಬರುತ್ತಾರೆ. ಹೀಗಾಗಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಸದನದಲ್ಲಿ ಹಾಜರಿರಬೇಕು. ಅಲ್ಲದೆ, ಅಧಿಕಾರಿಗಳು ಇರಬೇಕು ಎಂದು ತಾಕೀತು ಮಾಡಿದರು.


Thanks for reading ಸದನವನ್ನು ಮುಂದೂಡಿ ಎಲ್ಲರೂ ಪಿಕ್‍ನಿಕ್‍ ಹೋಗೋಣ ಎಂದ ಸಿದ್ದರಾಮಯ್ಯ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸದನವನ್ನು ಮುಂದೂಡಿ ಎಲ್ಲರೂ ಪಿಕ್‍ನಿಕ್‍ ಹೋಗೋಣ ಎಂದ ಸಿದ್ದರಾಮಯ್ಯ

Post a Comment