ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ: ಕುಟುಂಬಕ್ಕೆ ತಿಂಗಳಿಗೆ ₹4 ಸಾವಿರ ಹೊರೆ !

February 13, 2021
Saturday, February 13, 2021

 


ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರುತ್ತಿರುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ದೈನಂದಿನ ಜೀವನ ನಡೆಸಲೂ ಕಷ್ಟ ಪಡುವಂತಾಗಿದೆ. ಪೆಟ್ರೋಲ್, ಡೀಸೆಲ್‌ ಮಾತ್ರವಲ್ಲದೆ, ದಿನಸಿ ಪದಾರ್ಥ, ಹಣ್ಣು, ತರಕಾರಿ ಬೆಲೆಗಳೂ ಗಗನಕ್ಕೇರಿದ್ದು, ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ ಸಂದರ್ಭಕ್ಕಿಂತಲೂ ಈಗಲೇ ಹೆಚ್ಚು ಕಷ್ಟವನ್ನು ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಾರೆ.

'ಕೋವಿಡ್‌ ಬಿಕ್ಕಟ್ಟಿನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ. 15 ದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರುತ್ತಿದೆ. ನಾಲ್ಕು ಜನರ ಕುಟುಂಬವಿದ್ದರೆ, ಒಬ್ಬರಿಗೆ ₹1,000ದಂತೆ, ನಾಲ್ವರಿಗೆ ತಿಂಗಳಿಗೆ ₹4,000 ಹೆಚ್ಚು ಖರ್ಚು ಬರುತ್ತಿದೆ' ಎಂದು ಗ್ರಾಹಕ ಕೆ.ಎನ್.

ಉಮೇಶ್ ಹೇಳಿದರು.

'ಅಚ್ಛೇ ದಿನ್‌ ತರುತ್ತೇವೆ ಎಂದು ಭರವಸೆ ನೀಡಿ ಬಂದವರು ಜನಸಾಮಾನ್ಯರಿಗೆ ಸಂಕಷ್ಟವನ್ನೇ ತರುತ್ತಿದ್ದಾರೆ. ಬಹಳಷ್ಟು ಜನ ಕೆಲಸ ಕಳೆದು ಕೊಂಡಿದ್ದಾರೆ. ವೇತನ ಕಡಿತಗೊಳ್ಳುತ್ತಿದೆ. ಬೆಲೆ ಈ ರೀತಿ ಏರಿಕೆ ಮಾಡುತ್ತಿದ್ದರೆ ಬಡ ಮತ್ತು ಮಧ್ಯಮ ವರ್ಗದವರು ಏನು ಮಾಡಬೇಕು' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೆಲೆ ಏರಿಕೆ ನೆಪ?

'ಮನೆಯ ಬಳಿಯ ಸಣ್ಣ-ಪುಟ್ಟ ಅಂಗಡಿಯವರೂ ಬೆಲೆ ಏರಿಕೆ ನೆಪ ಹೇಳಿ ಸಾಮಗ್ರಿಗಳಿಗೆ ಐದಾರು ರೂಪಾಯಿ ಹೆಚ್ಚು ಕೇಳುತ್ತಾರೆ. ಯಾರನ್ನೇ ‍ಪ್ರಶ್ನಿಸಿದರೂ ಬೆಲೆ ಜಾಸ್ತಿ ಆಗಿದೆ ಎಂದು ಹೇಳುತ್ತಾರೆ. ಬಿಲ್‌ ಕೂಡ ಕೊಡುವುದಿಲ್ಲ' ಎಂದು ಸುನೀಲ್‌ಕುಮಾರ್‌ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದರು.

'ಬೆಲೆ ಏರಿಕೆ ನೆಪ ಎಂಬುದು ಸುಳ್ಳು. ಕಲಾಸಿಪಾಳ್ಯ, ಕೆ.ಆರ್. ಮಾರುಕಟ್ಟೆಯಲ್ಲಿ ನಾವೇ ಹೆಚ್ಚಿನ ದರಕ್ಕೆ ಸರಕುಗಳನ್ನು ಖರೀದಿಸಬೇಕಾಗಿದೆ. ಮೊದಲು ಎಷ್ಟು ಲಾಭ ಇಟ್ಟುಕೊಳ್ಳುತ್ತಿದ್ದೆವೋ ಅಷ್ಟಕ್ಕೆ ಅನುಗುಣವಾಗಿ ಬೆಲೆ ಜಾಸ್ತಿ ಮಾಡುತ್ತಿದ್ದೇವೆ. ತೀರಾ ಬೆಲೆ ಏರಿಕೆ ಮಾಡಿದರೆ ಗ್ರಾಹಕರು ಬರುವುದಿಲ್ಲ ಎಂಬುದು ಗೊತ್ತು. ಗ್ರಾಹಕರನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ' ಎಂದು ವರ್ತಕರೊಬ್ಬರು ಹೇಳಿದರು.

ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚು

ಸಗಟು ಮಾರುಕಟ್ಟೆಗಿಂತ ಸಹಜವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ವಿವಿಧ ಪದಾರ್ಥಗಳ ಬೆಲೆ ಹೆಚ್ಚಾಗಿಯೆ ಇದೆ. ಒಂದೊಂದು ಅಂಗಡಿಯಲ್ಲಿ, ಒಂದೊಂದು ಸರಕು ಅಥವಾ ಉತ್ಪನ್ನದ ಬೆಲೆಯಲ್ಲಿ ₹5ರಿಂದ ₹10ರವರೆಗೆ ವ್ಯತ್ಯಾಸವಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಸರಕು-ಸಾಗಣೆ ದರ ಹೆಚ್ಚಳದ ನೆಪದಲ್ಲಿ ಅಡುಗೆ ಎಣ್ಣೆ ಬೆಲೆಯನ್ನು ₹160ರಿಂದ ₹170ಕ್ಕೆ ಏರಿಸಲಾಗಿದೆ. ಪ್ರತಿ ಕೆ.ಜಿ. ಟೊಮೆಟೊ ದರವನ್ನು ₹20 ರಿಂದ ₹30ಕ್ಕೆ ಏರಿಸಲಾಗಿದೆ. ಬೆಳ್ಳುಳ್ಳಿ ₹100 ರಿಂದ ₹120, ಆಲೂಗಡ್ಡೆ ₹35 ರಿಂದ ₹40, ತೊಗರಿ ಬೇಳೆ ₹115ರಿಂದ ₹120, ಉದ್ದಿನ ಬೇಳೆ ₹125, ಹೆಸರು ಬೇಳೆ ₹100, ಕಡಲೆ ಬೇಳೆ ₹100, ಹೆಸರುಕಾಳು ₹115, ಕಡ್ಲೆಕಾಳು ₹60 ಹಾಗೂ ಬಟಾಣಿ ಕೆಜಿಗೆ ₹150ರವರೆಗೂ ಏರಿದೆ.

'ಪೆಟ್ರೋಲ್-ಡೀಸೆಲ್ ಬೆಲೆ ಏರುತ್ತಿರುವುದರಿಂದ ಉಳಿದೆಲ್ಲ ಸರಕುಗಳ ಬೆಲೆ ಹೆಚ್ಚಾಗುತ್ತಿದೆ. ಕಚ್ಚಾ ತೈಲದ ಬೆಲೆ ಇರುವುದು ಲೀಟರ್‌ಗೆ ₹36 ಮಾತ್ರ. ವಿಪರೀತ ತೆರಿಗೆ ಹಾಕುತ್ತಿರುವುದರಿಂದ ದರ ಹೆಚ್ಚಾಗಿದೆ. ತೆರಿಗೆ ಪ್ರಮಾಣ ಕಡಿಮೆ ಮಾಡಿದರೆ ಬೆಲೆಯೂ ಇಳಿಯಲಿದೆ' ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಹೇಳಿದರು.

***

ಸಾರ್ವಜನಿಕರು ಏನಂತಾರೆ ?

ಅಡುಗೆ ಎಣ್ಣೆ ಕೊಳ್ಳುವುದಕ್ಕೇ ಆಗುತ್ತಿಲ್ಲ. ತರಕಾರಿ, ಬೇಳೆ-ಕಾಳುಗಳ ಬೆಲೆ ಗಗನಕ್ಕೇರಿದೆ. ಕೇವಲ ತರಕಾರಿ, ಹಣ್ಣು ಖರೀದಿಗೆ ತಿಂಗಳಿಗೆ ₹3,000 ಖರ್ಚಾಗುತ್ತಿತ್ತು. ಈಗ ₹6,000 ಆದರೂ ಸಾಕಾಗುತ್ತಿಲ್ಲ.

ಪದ್ಮಾ, ಗ್ರಾಹಕಿ

***

ಮೊದಲು ₹80ಕ್ಕೆ ಹೂವು ಸಿಗುತ್ತಿತ್ತು. ಈಗ ₹ 160 ಆದರೂ ಒಳ್ಳೆಯ ಹೂವು ಸಿಗುತ್ತಿಲ್ಲ. ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ದರ ಜಾಸ್ತಿಯಾಗಿರುವುದು ಮನೆ ನಿರ್ವಹಣೆಯೇ ದೊಡ್ಡ ಸವಾಲಾಗಿದೆ

ಪುಟ್ಟರಾಜು, ಗ್ರಾಹಕ

***

ದಾಳಿಂಬೆ ಕೆ.ಜಿಗೆ ₹250ರ ವರೆಗೆ ಹೋಗಿದೆ. ಸೇಬಿನ ಬೆಲೆಯೂ ಜಾಸ್ತಿಯಾಗಿದೆ. ದರ ಹೆಚ್ಚಾಗಿರುವುದರಿಂದ ಜನ ಹಣ್ಣುಗಳನ್ನು ಕೊಳ್ಳುತ್ತಿಲ್ಲ. ವ್ಯಾಪಾರವೂ ಆಗುತ್ತಿಲ್ಲ

ಮಹಮ್ಮದ್‌ ಯಹಿಯಾ, ತರಕಾರಿ ವ್ಯಾಪಾರಿ

***

ದಿನಸಿ ಪದಾರ್ಥಗಳ ಬೆಲೆ ಹೆಚ್ಚಾಗಿರುವುದರಿಂದ ಹೂಡುವ ಬಂಡವಾಳ ಪ್ರಮಾಣವೂ ಜಾಸ್ತಿಯಾಗಿದೆ. ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಕೊಳ್ಳುತ್ತಿದ್ದಾರೆ. ವ್ಯಾಪಾರ ಕಡಿಮೆಯಾಗಿ, ಲಾಭದ ಪ್ರಮಾಣ ತೀರಾ ಇಳಿಮುಖಗೊಂಡಿದೆ

ದೀಪಕ್‌, ದಿನಸಿ ವ್ಯಾಪಾರಿ

***

ಸಾಮಾನ್ಯ ಜನರಿಗೆ ಎಲ್ಲ ರೀತಿಯ ಹೊರೆ ಹೇರಲಾಗುತ್ತಿದೆ. ಪೆಟ್ರೋಲ್ ದರ ಹೆಚ್ಚಾಗಿರುವುದರಿಂದ ಎಲ್ಲದರ ಬೆಲೆಯೂ ಹೆಚ್ಚಾಗುತ್ತಿದೆ. ಚುನಾವಣೆ ಸಮಯದಲ್ಲಿ ಭಾಷಣ ಮಾಡುತ್ತಾರೆ. ಆಮೇಲೆ ಪಂಗನಾಮ ಹಾಕುತ್ತಾರೆ.

ಲೋಕೇಶ್, ಗ್ರಾಹಕ

***

ಪೆಟ್ರೋಲ್‌ ಹಾಕಿಸುವುದಕ್ಕೆ ಹೊಟ್ಟೆ ನೋವು ಬಂದಂತಾಗುತ್ತದೆ. ರಾಜಕಾರಣಿಗಳಿಗೆ ಜನಸಾಮಾನ್ಯರ ಕಷ್ಟ ಗೊತ್ತಾಗುತ್ತಿಲ್ಲ. ಕಚ್ಚಾತೈಲದ ಬೆಲೆ ಜಾಸ್ತಿ ಇಲ್ಲ. ಆದರೂ ತೆರಿಗೆ ಹಾಕಿ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ.

ಹಿದಾಯತ್‌ ಉಲ್ಲಾ, ಗ್ರಾಹಕ


Thanks for reading ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ: ಕುಟುಂಬಕ್ಕೆ ತಿಂಗಳಿಗೆ ₹4 ಸಾವಿರ ಹೊರೆ ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ: ಕುಟುಂಬಕ್ಕೆ ತಿಂಗಳಿಗೆ ₹4 ಸಾವಿರ ಹೊರೆ !

Post a Comment