27 ಕೋಟಿ ಭಾರತೀಯರಿಗೆ ಕೊರೋನಾ!

February 04, 2021

 


ನವದೆಹಲಿ(ಫೆ.05): ದೇಶದ 10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದ ಶೇ.21ರಷ್ಟುಮಂದಿಯಲ್ಲಿ ಕೊರೋನಾ ವೈರಸ್‌ನ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ ಎಂಬ ವಿಚಾರ ಐಸಿಎಂಆರ್‌ನ ಸೆರೋ ಸಮೀಕ್ಷೆಯಿಂದ ತಿಳಿದುಬಂದಿದೆ. ಅಂದರೆ ಸುಮಾರು 27 ಕೋಟಿ ಜನರಿಗೆ ಕೊರೋನಾ ಸೋಂಕು ತಗುಲಿ, ಅವರು ಗುಣಮುಖರಾಗಿದ್ದಾರೆ. ಆದರೆ ಅವರಿಗೆ ಇದರ ಅರಿವೇ ಆಗಿಲ್ಲ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಕಳೆದ ವರ್ಷದ ಡಿಸೆಂಬರ್‌ 17ರಿಂದ ಜನವರಿ 8ರವರೆಗೆ ದೇಶಾದ್ಯಂತ ಸೆರೋ ಸಮೀಕ್ಷೆಯನ್ನು ನಡೆಸಿದ್ದು, ಇದರಲ್ಲಿ ಶೇ.21ರಷ್ಟುಮಂದಿಯಲ್ಲಿ ಕೊರೋನಾ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. ದೇಶದ 21 ರಾಜ್ಯಗಳ 70 ಜಿಲ್ಲೆಗಳ 700 ಗ್ರಾಮಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಇದು ಗೊತ್ತಾಗಿದೆ.

ಸಮೀಕ್ಷೆ ಕುರಿತಾದ ಮಾಹಿತಿಯನ್ನು ಗುರುವಾರ ನೀಡಿದ ಐಸಿಎಂಆರ್‌ ಪ್ರಧಾನ ನಿರ್ದೇಶಕ ಡಾ.

ಬಲರಾಂ ಭಾರ್ಗವ ಅವರು, 'ಸಮೀಕ್ಷೆಯ ಪ್ರಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.21.4, 10ರಿಂದ 17 ವರ್ಷದೊಳಗಿನ ಶೇ.25.3ರಷ್ಟುಮಕ್ಕಳಲ್ಲೂ ಸಹ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಇತ್ತು' ಎಂದು ತಿಳಿಸಿದರು. ಇದೇ ವೇಳೆ ಈ ಅಂಕಿ ಸಂಖ್ಯೆಗಳು ದೇಶದ ಬಹುಪಾಲು ಜನರು ಇನ್ನೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಮುಕ್ತವಾಗಿದೆ ಎಂಬ ಸಂದೇಶವನ್ನೂ ರವಾನಿಸಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವ ಅಗತ್ಯ ಈಗಲೂ ಇದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಹೆಚ್ಚು ತೀವ್ರತೆ:

ಗಾಳಿಯ ಮೂಲಕವೂ ಹಬ್ಬುತ್ತದೆ ಎನ್ನಲಾಗುವ ಕೊರೋನಾ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ಶೇ.31.7ರಷ್ಟುತೀವ್ರವಾಗಿ ಹಬ್ಬಿದರೆ, ಕೊಳಗೇರಿ ಅಲ್ಲದೆ ನಗರಗಳಲ್ಲಿ ಶೇ.26.2ರಷ್ಟುವೇಗವಾಗಿ ಹಬ್ಬುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ತೀವ್ರತೆ ಶೇ.19.1ರಷ್ಟುಮಾತ್ರವೇ ಇದೆ. ಜೊತೆಗೆ 60 ವರ್ಷ ಮೇಲ್ಪಟ್ಟಶೇ.23.4 ಮಂದಿ ಕೊರೋನಾದಿಂದ ತತ್ತರಿಸಿದ್ದಾರೆ ಎಂದು ತಿಳಿಸಿದರು.


Related Articles

Advertisement
Previous
Next Post »