ಶಿಕ್ಷಣ ಸಚಿವರ ವಿರುದ್ಧ ಫೆಬ್ರವರಿ 23ಕ್ಕೆ ಬೃಹತ್ ಹೋರಾಟ

February 14, 2021

 


ರಾಮನಗರ, ಫೆಬ್ರವರಿ 14: ಖಾಸಗಿ ಶಾಲೆ ನೆರವಿಗೆ ಧಾವಿಸಿದ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಮ್ಮದೇ ಸರ್ಕಾರದ ಸಚಿವ ವಿರುದ್ಧ ಹರಿಹಾಯ್ದರು. ಶಿಕ್ಷಣ ಸಚಿವರ ನಡೆ ಖಂಡಿಸಿ ಫೆಬ್ರವರಿ 23 ರಂದು ಹೋರಾಟ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.

ಚನ್ನಪಟ್ಟಣದ ರೋಟರಿ ಬಾಲ ಭವನದಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಭಾಗವಹಿಸಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, "ಇತರೆ ಇಲಾಖೆಗಳಲ್ಲಿ ಕೆಲಸ ಮಾಡುವ ಮಂದಿಗೆ ಇಲಾಖೆಯ ಮಂತ್ರಿಗಳು ಮತ್ತು ಸರ್ಕಾರ ಸ್ವಂದಿಸಿದೆ.

ಆದರೆ ಶಿಕ್ಷಣ ಇಲಾಖೆಯ ಮಂತ್ರಿಗಳು ಖಾಸಗಿ ಶಾಲೆಗಳ ಶಿಕ್ಷಕರಿಗೆ ಸ್ಪಂದಿಸಿಲ್ಲ" ಎಂದು ತಮ್ಮ ಪಕ್ಷದ ಸಚಿವರ ವಿರುದ್ಧವೇ ಆರೋಪಿಸಿದರು.

"ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಖಾಸಗಿ ಶಾಲೆಯ ಶಿಕ್ಷಕರಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ ಹಾಗೂ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದರು. ಇಲಾಖೆಯ ಮಂತ್ರಿಗಳು ಮಾತ್ರ ಖಾಸಗಿ ಶಿಕ್ಷಕರಿಗೆ ನೆರವನ್ನು ನೀಡಿಲ್ಲ. ಇದರಿಂದ ಮನನೂಂದು ಹೋರಾಟಕ್ಕೆ ಮುಂದಾಗಿದ್ದೇವೆ" ಎಂದು ಹೇಳಿದರು.

"ಈ ಸಚಿವರು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯನ್ನು ಎತ್ತಿಕಟ್ಟು ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ.ನನಗೆ ಶೈಕ್ಷಣಿಕ ಕ್ಷೇತ್ರವೇ ಪರಮೋಚ್ಛ. ಹಾಗಾಗಿ ನಮ್ಮದೇ ಪಕ್ಷ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಸಹ ಯಾವುದೇ ಖಾಸಗಿ ಶಿಕ್ಷಕರಿಗೆ ನೆರವಿಗೆ ಮುಂದಾಗದ ಶಿಕ್ಷಣ ಸಚಿವರ ವಿರುದ್ದ ಹೋರಾಟ ಹಮ್ಮಿಕೊಂಡಿದ್ದೇವೆ" ಎಂದರು.

ಕೋವಿಡ್ ಲಾಕ್ ಡೌನ್ ಸಮಯದಿಂದಲೂ ಶುಲ್ಕ, ವೇತನ ನೀಡುವ ವಿಚಾರದಲ್ಲಿ ಖಾಸಗಿ ಶಾಲೆಗಳು, ಶಿಕ್ಷಣ ಸಚಿವ ಸುರೇಶ್ ಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಈಗ ಸಚಿವರ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದೆ.


Related Articles

Advertisement
Previous
Next Post »