ಶಾಲೆಗಳಿಗೆ ಸರ್ಕಾರ ಅನುದಾನ ನೀಡದಿದ್ದಕ್ಕೆ ಗರಂ.. ಕಲ್ಯಾಣ ಕರ್ನಾಟಕ ಭಾಗದ 1500 ಖಾಸಗಿ ಶಾಲೆಗಳು ಇಂದು ಬಂದ್‌ಗೆ ನಿರ್ಧಾರ

February 14, 2021

 


ಬೆಂಗಳೂರು: ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯೇ ಗೊಂದಲದ ಗೂಡಾಗಿದೆ. ಒಂದ್ಕಡೆ ಖಾಸಗಿ ಶಾಲೆಗಳ ಶುಲ್ಕ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ‌ ಮಧ್ಯೆ ಕಲ್ಯಾಣ ಕರ್ನಾಟಕದ ಅನುದಾನ ರಹಿತ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುದಾನ ನೀಡುವಂತೆ ಡೆಡ್ ಲೈನ್ ನೀಡಲಾಗಿತ್ತು. ಆದ್ರೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ಮನವಿಗೆ ಪುರಸ್ಕರಿಸಿಲ್ಲ. ಹೀಗಾಗಿ, ಇವತ್ತು ಒಂದು ದಿನದ ಮಟ್ಟಿಗೆ ಒಂದೂವರೆ ಸಾವಿರ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಬಂದ್ ಆಗಲಿವೆ.

ಬೇಡಿಕೆಗಳು ಏನು?
1995 ರಿಂದ 2015 ರವರೆಗಿನ ಶಾಲೆಗಳಿಗೆ ಅನುದಾನ ನೀಡಬೇಕು ಎಂಬುದು‌ ಕಲ್ಯಾಣ ಕರ್ನಾಟಕದ ಅನುದಾನ ರಹಿತ ಖಾಸಗಿ ಶಾಲೆಗಳ ಆಗ್ರಹವಾಗಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿರುವ ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟದಲ್ಲಿ ಮುಚ್ಚುವ ಹಂತದಲ್ಲಿದೆ.

ಆ ಭಾಗದ ಸರ್ಕಾರಿ ಶಾಲೆಗಳಲ್ಲೂ 20 ಸಾವಿರ ಶಿಕ್ಷಕರ ಕೊರತೆ ಇದೆ. ಏಳು ವರ್ಷವಾದ್ರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದು ರೂಪಾಯಿ ಅನುದಾನ ಸಿಕ್ಕಿಲ್ಲ. ಈ ಭಾಗದಲ್ಲಿ ಮಕ್ಕಳ ಮಾರಾಟ ದಂಧೆ ಕೂಡ ಜೋರಾಗಿದ್ದು, ಮಕ್ಕಳು ಬಾಲಕಾರ್ಮಿಕರಾಗ್ತಿದ್ದಾರೆ.

ಹೀಗಾಗಿ ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಮೀಸಲಿರುವ ಹಣದಲ್ಲಿ ಆ ಮಕ್ಕಳ ಪಾಲನ್ನು ನ್ಯಾಯಯುತವಾಗಿ ಕೊಡಬೇಕು ಅನ್ನೋದು ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲಾ ಒಕ್ಕೂಟದ ಬೇಡಿಕೆಯಾಗಿದೆ.

ಒಂದ್ಕಡೆ ಪೂರ್ಣ ಪ್ರಮಾಣದ ಶಾಲೆ ಆರಂಭ, ಫೀಸ್ ಗೊಂದಲ ಸೇರಿದಂತೆ ಗೊಂದಲಗಳ ಸುಳಿಯಲ್ಲಿಯೇ ಇರೋ ಶಿಕ್ಷಣ ಸಚಿವರಿಗೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಹೋರಾಟ ಬಿಸಿ ತುಪ್ಪವಾಗಿದೆ. ಎಲ್ಲಾ ಬೇಡಿಕೆಗಳು ಒಂದರ ಮೇಲೊಂದು ಬರುತ್ತಿದ್ದು, ಇದನ್ನ ಶಿಕ್ಷಣ ಇಲಾಖೆ ಹೇಗೆ ನಿಭಾಯಿಸುತ್ತೆ ಅನ್ನೋದೆೇ ದೊಡ್ಡ ಪ್ರಶ್ನೆಯಾಗಿದೆ.


Related Articles

Advertisement
Previous
Next Post »