ಮಡಿಕೇರಿ ಜ.8 : ಕೊಡವರು ಬೀಫ್ ತಿನ್ನುತ್ತಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಇಡೀ ಕೊಡವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿಯ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ನೀಡಿರುವ ದೂರಿನ ಅನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂತೆಯಂಡ ರವಿಕುಶಾಲಪ್ಪ ಅವರು, ಸಿದ್ದರಾಮಯ್ಯ ವಿರುದ್ಧ ತಾನು ನೀಡಿದ್ದ ದೂರು ಇದೀಗ ದಾಖಲಾಗಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ತಾನು ನೀಡಿದ ದೂರನ್ನು ಜ.7 ರಂದು ಸೆಕ್ಷನ್ 153 ರಡಿ ದಾಖಲಿಸಿಕೊಳ್ಳಲಾಗಿದ್ದು, ಇದಕ್ಕೆ ಜಾಮೀನು ಸಿಗಲಿದೆ. ಆದರೆ, ಇಡೀ ಕೊಡವ ಸಮುದಾಯವನ್ನು ತಮ್ಮ ಹೇಳಿಕೆಯ ಮೂಲಕ ಘಾಸಿಗೊಳಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ಸೆಕ್ಷನ್ 153ಎ, 295 ಎ ಅನ್ವಯ ಪ್ರಕರಣ ದಾಖಲಾಗಬೇಕಾಗಿತ್ತು.
ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಕೊಡವ ಸಮುದಾಯವನ್ನು ಅಪಮಾನಿಸುವ, ಹೀಯಾಳಿಸುವ ರೀತಿಯ ಹೇಳಿಕೆ ನೀಡಲಾಗಿದೆ. ಈ ಹಿಂದೆ ಟಿಪ್ಪು ಜಯಂತಿ ನಡೆಸಿಯೇ ಸಿದ್ಧ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದರು. ಇದೀಗ ಹಸುವನ್ನು ತಾಯಿಯಂತೆ ಕಾಣುವ ಕೊಡವ ಸಮೂಹದ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಬಾಯಿ ತಪ್ಪಿನಿಂದ ಹಾಗೆ ಹೇಳಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾತ್ರ ಸಮರ್ಥಿಸಿಕೊಂಡಿದ್ದು, ಉಳಿದ ಕಾಂಗ್ರೆಸ್ಸಿಗರ ಮೌನದ ಹಿಂದಿನ ಗುಟ್ಟೇನು ಎಂದು ರವಿಕುಶಾಲಪ್ಪ ಪ್ರಶ್ನಿಸಿದರು.
ಕೊಡವ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವವರನ್ನು ಸಮರ್ಥಿಸುವ ಕಾಂಗ್ರೆಸ್ಸಿಗರ ವರ್ತನೆಯನ್ನು ನಾವಿಂದು ಪ್ರಶ್ನಿಸಬೇಕಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಕಸ್ತೂರಿ ರಂಗನ್ ವರದಿ ಮರು ಪರಿಶೀಲನೆ
ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕಸ್ತೂರಿ ರಂಗನ್ ಅವರ ವರದಿಯ ಮರು ಪರಿಶೀಲನೆ ಅನಿವಾರ್ಯವಾಗಿದೆ ಎಂದು ಶಾಂತೆಯಂಡ ರವಿಕುಶಾಲಪ್ಪ ತಿಳಿಸಿದರು.
ನೈಜಾಂಶಗಳನ್ನು ಕೇಂದ್ರ ಮತ್ತು ನ್ಯಾಯಾಲಯಕ್ಕೆ ತಿಳಿಸುವ ಕೆಲಸ ರಾಜ್ಯ ಸರ್ಕಾರದಿಂದ ನಡೆಯಬೇಕು. ನಾನು ಕೂಡ ಈ ಸಂಬಂಧ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆಯೊಂದಿಗೆ ತಲೆತಲಾಂತರಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರ ರಕ್ಷಣೆಯೂ ಆಗಬೇಕಾಗಿದೆ. ಕಾರ್ಯಪಡೆಯ ಮೂಲಕ ಖಾಲಿ ಇರುವ ಪ್ರದೇಶಗಳಲ್ಲಿ ಅರಣ್ಯವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
ಜ.11 ರಂದು ಸಭೆ
ಮಡಿಕೇರಿಯಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಕಡಮಕಲ್ಲು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಳಕೆಯಾದ 12 ಎಕರೆ ಜಾಗಕ್ಕೆ ಬದಲಾಗಿ ಅರಣ್ಯ ಇಲಾಖೆಗೆ 48 ಏಕರೆ ಜಾಗವನ್ನು ಒದಗಿಸಿಕೊಡಲಾಗಿದೆ. ಹೀಗಿದ್ದೂ ರಸ್ತೆಯ ಕುರಿತ ಗೊಂದಲಗಳು ಹಾಗೇ ಇದ್ದು, ಇದು ಮತ್ತು ದಕ್ಷಿಣ ಕೊಡಗಿನ ಕೂಟಿಯಾಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜ. 11 ರಂದು ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥದ ಬಗ್ಗೆ ಚರ್ಚಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಕೊಕ್ಕಲೆರ ಅಯ್ಯಪ್ಪ, ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ ಹಾಗೂ ಪಕ್ಷದ ಪ್ರಮುಖ ಕಿಮ್ಮುಡಿರ ಜಗದೀಶ್ ಉಪಸ್ಥಿತರಿದ್ದರು.
EmoticonEmoticon