ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲು ಆಗ್ರಹ

January 09, 2021

 


ಬೆಳಗಾವಿ: 'ರಾಜ್ಯ ಸರ್ಕಾರವು ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸದಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ' ಎಂದು ಎಐಡಿಎಸ್‌ಒ ಜಿಲ್ಲಾ ಸಂಘಟನಾಕಾರ ಮಹಾಂತೇಶ ಬಿಳೂರ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 'ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕವನ್ನು ಸರ್ಕಾರ ಘೋಷಿಸಿದೆ. ಮತ್ತು ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆಗಳು ಕೂಡ ನಿಗದಿಯಾಗಿವೆ. ಇದು ಕೂಡ ವಿದ್ಯಾರ್ಥಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕೊರೊನಾದಿಂದಾಗಿ ಹೇರಲಾದ ಲಾಕ್‌ಡೌನ್‌ ಪ್ರಭಾವದಿಂದ ವಿದ್ಯಾರ್ಥಿಗಳ ಕುಟುಂಬಗಳು ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ದುಡಿಮೆಯಲ್ಲಿ ತೊಡಗಿದ್ದಾರೆ.

ಪರಿಸ್ಥಿತಿಯು ಹೀಗಿರುವಾಗ, ವಿದ್ಯಾರ್ಥಿವೇತನ ಕೂಡ ಸಿಗದೇ ಹೋದರೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಸರ್ಕಾರವು ವಿದ್ಯಾರ್ಥಿಗಳ ಸಂಕಷ್ಟ ನಿವಾರಣೆಗೆ ಕೂಡಲೇ ಸ್ಪಂದಿಸಬೇಕು. ವಿದ್ಯಾರ್ಥಿವೇತನಗಳಿಗೆ ಕೂಡಲೇ ಅರ್ಜಿಗಳನ್ನು ಆಹ್ವಾನಿಸಿ ಆತಂಕ ದೂರ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.


Related Articles

Advertisement
Previous
Next Post »