ನಾಲ್ಕು ರಾಜ್ಯಗಳಿಗೆ ವಿಸ್ತರಿಸಿದ ಹಕ್ಕಿಜ್ವರ: ಸಾವಿರಾರು ಹಕ್ಕಿಗಳ ಸಾವು

January 05, 2021

 


ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಭಾರತದಲ್ಲಿ ಇದೀಗ ಹಕ್ಕಿಜ್ವರದ ಭೀತಿ ವ್ಯಾಪಕವಾಗ ತೊಡಗಿದ್ದು, ಒಟ್ಟು ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಕೇರಳ ಮತ್ತು ರಾಜಸ್ಥಾನದಲ್ಲಿ ಹಕ್ಕಿಜ್ವರ ವ್ಯಾಪಕವಾಗಿದ್ದು ಈ ವರೆಗೂ ಲಕ್ಷಾಂತರ ಪಕ್ಷಿಗಳು ಈ ಮಾರಣಾಂತಿಕ ರೋಗದಿಂದಾಗಿ ಸಾವನ್ನಪ್ಪಿವೆ. ರಾಜಸ್ಥಾನದಲ್ಲಿ 250ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದು, ಅವುಗಳಿಗೆ ಹಕ್ಕಿ ಜ್ವರದ ವೈರಸ್ ತಗುಲಿರುವುದು ಪರೀಕ್ಷೆ ಬಳಿಕ ದೃಢಪಟ್ಟಿತ್ತು. ಅದರ ಬೆನ್ನಲ್ಲೇ ಕೇರಳದ ಅಲಪ್ಪುಳ, ಕೊಟ್ಟಾಯಂ ಜಿಲ್ಲೆಗಳಲ್ಲಿ ಕೂಡ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇಲ್ಲಿನಜಿಲ್ಲಾಡಳಿತಗಳು ಕಂಟ್ರೋಲ್ ಈಗಾಗಲೇ ರೂಂಗಳನ್ನು ಆರಂಭಿಸಿವೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ ಕೊನೆಯ ವಾರದಲ್ಲಿ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸಾಕಷ್ಟು ಬಾತುಕೋಳಿಗಳು ಸಾವನ್ನಪ್ಪಿದ್ದವು.

ಅವುಗಳಲ್ಲಿ 8 ಬಾತುಕೋಳಿಗಳ ಸ್ಯಾಂಪಲ್ ಅನ್ನು ಭೂಪಾಲ್​ನ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 5 ಸ್ಯಾಂಪಲ್​ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ. ನೀಂದೂರ್​ನ ಬಾತುಕೋಳಿಯ ಫಾರ್ಮ್ ಒಂದರಲ್ಲೇ 1,500 ಬಾತುಕೋಳಿಗಳು ಸಾವನ್ನಪ್ಪಿವೆ. ಹಾಗೆಯೇ ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ ಜಿಲ್ಲೆಯ ಕೆಲವು ಫಾರ್ಮ್​ಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಕೇರಳದ ಫಾರ್ಮ್​ಗಳಲ್ಲಿ 12,000 ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಬಾತುಕೋಳಿಗಳನ್ನು ಸಾಕಿದವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.

ಅಂತೆಯೇ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಈ ಬಗ್ಗೆ ಮಾಹಿತಿ ನೀಡಿದ್ದ ರಾಜಸ್ಥಾನ ಪಶು ಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ, ಮುಖ್ಯವಾಗಿ ಕಾಗೆಗಳಲ್ಲಿ ಹಕ್ಕಿ ಜ್ವರದ ಕೇಸ್​ಗಳು ಹೆಚ್ಚಾಗಿ ಪತ್ತೆಯಾಗಿವೆ. ಇದು ಮನುಷ್ಯರಿಗೂ ಹರಡುವ ಆತಂಕ ಎದುರಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಕೊರೋನಾ ಜೊತೆಗೆ ಹಕ್ಕಿ ಜ್ವರವನ್ನು ಕೂಡ ನಿಯಂತ್ರಿಸಬೇಕಾದ ಸವಾಲು ನಮ್ಮ ಮುಂದಿದೆ. ಮುಖ್ಯವಾಗಿ ಕೋಟ ಮತ್ತು ಜೋಧ್​ಪುರದಲ್ಲಿ ಹಕ್ಕಿ ಜ್ವರದಿಂದ ಕಾಗೆಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹಕ್ಕಿ ಜ್ವರದ ವೈರಸ್ ಬಹಳ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ಡಿಸೆಂಬರ್ 25ರಿಂದ ಜಲಾವರ್​ನಲ್ಲಿ ಕಾಗೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸಾವನ್ನಪ್ಪಿದ ಕಾಗೆಗಳ ಸ್ಯಾಂಪಲ್ ಅನ್ನು ಭೋಪಾಲ್​ನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್​ಗೆ ಕಳುಹಿಸಲಾಗಿದೆ. ಇದುವರೆಗೂ ಜಲಾವರ್​ನಲ್ಲಿ 100, ಬರಾನ್​ನಲ್ಲಿ 72, ಕೋಟದಲ್ಲಿ 47, ಪಲಿಯಲ್ಲಿ 19, ಜೋಧ್​ಪುರದಲ್ಲಿ 7, ಜೈಪುರದಲ್ಲಿ 7 ಕಾಗೆಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಅಂತೆಯೇ ಮಧ್ಯಪ್ರದೇಶದಲ್ಲೂ ಹಕ್ಕಿಜ್ವರದಿಂದಾಗಿ ಹಕ್ಕಿಗಳು ಸಾವನ್ನಪ್ಪಿದ್ದು, ಇಂದೋರ್​ನಲ್ಲಿ 50ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದವು. ಇದರ ಜೊತೆಗೆ ಹಿಮಾಚಲ ಪ್ರದೇಶದಲ್ಲಿ ಕೂಡ 1,800 ಕೊಕ್ಕರೆಗಳು ಸಾವನ್ನಪ್ಪಿವೆ. ಇದಕ್ಕೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.


Related Articles

Advertisement
Previous
Next Post »