ಶಾಲೆಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ 100 ರೂ. ಪ್ರೋತ್ಸಾಹ ಧನ ನೀಡಲಿರುವ ಈ ರಾಜ್ಯ ಸರಕಾರ

January 04, 2021

 


ಗುವಾಹಟಿ,ಜ.04: ಬಾಲಕಿಯರಿಗೆ ಶಾಲೆಗೆ ತೆರಳಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಸ್ಸಾಂ ಸರಕಾರ ಶಾಲೆಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ ತಲಾ 100 ರೂ.ಪ್ರೋತ್ಸಾಹಧನ ನೀಡಲಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ.

ಪದವಿ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷದ ಜನವರಿ ಅಂತ್ಯದೊಳಗೆ ಸರಕಾರ ಕ್ರಮವಾಗಿ ತಲಾ ರೂ 1,500 ಹಾಗೂ ರೂ 2,000 ಜಮೆ ಮಾಡಲಿದ್ದು ಇದನ್ನು ಬಳಸಿ ವಿದ್ಯಾರ್ಥಿಗಳು ಪುಸ್ತಕ ಖರೀದಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ. ಶಿವಸಾಗರ್ ಎಂಬಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯರಿಗೆ ಸರಕಾರದಿಂದ ದ್ವಿಚಕ್ರವಾಹನ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ಒಟ್ಟು 948 ವಿದ್ಯಾರ್ಥಿನಿಯರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ.

ಮುಂದಿನ ವರ್ಷಗಳಲ್ಲಿ ಒಂದು ಲಕ್ಷ ವಿದ್ಯಾರ್ಥಿನಿಯರು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡರೂ ಸರಕಾರ ಅವರಿಗೆ ದ್ವಿಚಕ್ರ ವಾಹನ ನೀಡಲಿದೆ ಎಂದು ಸಚಿವರು ಹೇಳಿದರು.

ಕಳೆದ ವರ್ಷದ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ 22,245 ವಿದ್ಯಾರ್ಥಿನಿಯರಿಗೆ ದ್ವಿಚಕ್ರ ವಾಹನ ವಿತರಿಸಲು ಸರಕಾರ ರೂ 144.30 ಕೋಟಿ ವೆಚ್ಚ ಮಾಡಲಿದೆ.

2018ರಲ್ಲಿ 12ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ 5,000 ವಿದ್ಯಾರ್ಥಿನಿಯರು ಹಾಗೂ 2019ರಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡ 10,000 ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳು ದ್ವಿಚಕ್ರ ವಾಹನಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

Related Articles

Advertisement
Previous
Next Post »