ಬಾವಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

December 16, 2020

 


ಮಂಗಳೂರು, ಡಿ.16: ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಬಿಕರ್ನಕಟ್ಟೆ ನಿವಾಸಿ, ಶಿಕ್ಷಕಿ ಗ್ರೆಟ್ಟಾ ಗೊನ್ಸಾಲ್ವಿಸ್ (53) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.
ಇವರು ಬಿಕರ್ನಕಟ್ಟೆ ಸೌಜನ್ಯ ಲೇನ್‌ನಲ್ಲಿರುವ ತನ್ನ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಗ್ರೆಟ್ಟಾ ಅವರು ಪುತ್ರ ಮತ್ತು ಪುತ್ರಿಯ ಜತೆ ಬಿಕರ್ನಕಟ್ಟೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆಕೆಯ ಪತಿ ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದರು. ತಿಂಗಳಿಗೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಅವರು ಈ ಹಿಂದೆ ಕಳೆದ ನವೆಂಬರ್‌ನಲ್ಲಿ ಮಂಗಳೂರಿಗೆ ಬಂದು ಹೋಗಿದ್ದರು.

ಡೆತ್ ನೋಟ್ ಪತ್ತೆ: ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ಗ್ರೆಟ್ಟಾ ಅವರು ಮಕ್ಕಳ ಜತೆ ಮಲಗಿದ್ದರು. ಬುಧವಾರ ಬೆಳಗ್ಗೆ ಮಕ್ಕಳಿಗೆ ಎಚ್ಚರ ಆದಾಗ ತಾಯಿ ಪಕ್ಕದಲ್ಲಿ ಇರಲಿಲ್ಲ. ಮೇಜಿನ ಮೇಲೆ ಚೀಟಿಯೊಂದು ಸಿಕ್ಕಿದ್ದು, ಅದರಲ್ಲಿ 'ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನಾನು ಬದುಕುವುದಿಲ್ಲ' ಎಂದು ಬರೆಯಲಾಗಿತ್ತು. ಬಳಿಕ ಮಕ್ಕಳು ಹುಡುಕಾಡಿದಾಗ ಮನೆ ಆವರಣದ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡು ಬಂದಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Advertisement
Previous
Next Post »