ಮರದಿಂದ ನೋಟುಗಳ ಸುರಿಮಳೆ- ಹಣ ಹೆಕ್ಕಲು ನೂಕುನುಗ್ಗಲು: ನಿಜವಾಗಿಯೂ ಆಗಿದ್ದೇನು?

December 23, 2020

 


ಸೀತಾಪುರ (ಉತ್ತರಪ್ರದೇಶ): 'ಯಾರಾದರೂ ಹಣಕ್ಕೆ ಪೀಡಿಸಿದಾಗ ಹಣವೇನು ಮರದಿಂದ ಉದುರುತ್ತದೆಯೇ ಎಂದು ಕೇಳುತ್ತೇವೆ. ಆದರೆ ನಿಜವಾಗಿಯೂ ಮರದಿಂದ ಹಣದ ಸುರಿಮಳೆಯಾದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

ಮರದಿಂದ ನೋಟುಗಳು ಬೀಳುತ್ತಿದ್ದಂತೆಯೇ ಜನರು ನೂಕುನುಗ್ಗಲಾಗಿ ಬಂದು ಹಣವನ್ನು ಬಾಚಿಕೊಂಡು ಹೋದರು. ಹೀಗೆ ಹಣ ಬೀಳುತ್ತಿರುವ ಸುದ್ದಿ ಕ್ಷಣಮಾತ್ರದಲ್ಲಿ ಎಲ್ಲೆಡೆ ಹರಡಿ ಜನರು ತಂಡೋಪತಂಡವಾಗಿ ಬರತೊಡಗಿದರು. ನಂತರ ಕೊನೆಗೂ ಸಮಸ್ಯೆ ಬಗೆಹರಿಯಿತು.

ಅಷ್ಟಕ್ಕೂ ಆಗಿದ್ದೇನೆಂದರೆ, ಈ ಹಣವೇನೂ ಮರದಿಂದ ಉದುರಲಿಲ್ಲ, ಬದಲಿಗೆ ಮರದ ಮೇಲೆ ಕುಳಿತ ಕೋತಿಯೊಂದರ ಚೇಷ್ಠೆಯಿದು!
ಸೀತಾಪುರದ ವಿಕಾಸ್ ಭವನದ ರಿಜಿಸ್ಟ್ರಾರ್​ ಕಚೇರಿಗೆ (ನೋಂದಣಾಧಿಕಾರಿ ಕಚೇರಿ) ಕೆಲಸ ನಿಮಿತ್ತ ಬಂದಿದ್ದ ವೃದ್ಧರೊಬ್ಬರು ಕಚೇರಿ ಹೊರಭಾಗದಲ್ಲಿ ಕುಳಿತಿದ್ದರು.

ಅವರು ಬ್ಯಾಗಿನಲ್ಲಿ 4 ಲಕ್ಷ ರೂಪಾಯಿ ಇಟ್ಟುಕೊಂಡಿದ್ದರು. ಅಲ್ಲಿ ಮಂಗನಕಾಟ ಹೆಚ್ಚಿಗೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಅದೆಲ್ಲಿ ಇತ್ತೋ ಮಂಗ ಗೊತ್ತಿಲ್ಲ. ಬ್ಯಾಗನ್ನು ಎತ್ತಿಕೊಂಡು ಮೇಲೆ ಹಾರಿಬಿಟ್ಟಿದೆ. ಬ್ಯಾಗ್​ ಅನ್ನು ಸುಮ್ಮನೇ ಇಟ್ಟುಕೊಳ್ಳದ ಅದು ಕಿತ್ತು ಹಾಕಿದೆ. ಅದು ಬ್ಯಾಗ್​ ಕಿತ್ತ ರಭಸಕ್ಕೆ ಬ್ಯಾಗ್​ನಲ್ಲಿದ್ದ ಲಕ್ಷಾಂತರ ರೂಪಾಯಿ ಗಾಳಿಯಲ್ಲಿ ಹಾರಾಡುತ್ತ ನೋಂದಣಿ ಕಚೇರಿ ಸುತ್ತಮುತ್ತ ಬಿದ್ದಿದೆ. ಮರದಿಂದ ನೋಟು ಉದುರುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತೆಯೇ ಜನ ಜಮಾಯಿಸಿದ್ದಾರೆ.

ನಂತರ ಎಲ್ಲರೂ ಸೇರಿ ಮಂಗನಿಂದ ಆ ಬ್ಯಾಗನ್ನು ಕೆಳಕ್ಕೆ ತರಿಸುವಲ್ಲಿ ಯಶಸ್ವಿಯಾದರಾದರೂ ಅದಾಗಲೇ ಸಹಸ್ರಾರು ರೂಪಾಯಿಗಳನ್ನು ಮಂಗ ಕೆಳಕ್ಕೆ ಚೆಲ್ಲಿತ್ತು. ಅದನ್ನು ಅಲ್ಲಿಗೆ ಬಂದವರು ಜೇಬಿಗೆ ತುಂಬಿಸಿಕೊಂಡು ಹನುಮರಾಯ ನಮಗೆ ಕೃಪೆ ಮಾಡಿದ ಎಂದು ಕೊಂಡಾಡಿಕೊಂಡು ಹೋದರು.


Related Articles

Advertisement
Previous
Next Post »