ರಾಜ್ಯದಲ್ಲಿ ಮತ್ತೆ ವಿದ್ಯಾಗಮ' ಪುನಾರಂಭ ..?

December 07, 2020
Monday, December 7, 2020

 


ಬೆಂಗಳೂರು (ಡಿ.08): ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ 'ವಿದ್ಯಾಗಮ' ಯೋಜನೆಯನ್ನು ಪುನರಾರಂಭಿಸಬಹುದೇ ಎಂಬ ಬಗ್ಗೆ ಹತ್ತು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಬಡಮಕ್ಕಳಿಗೆ ಆನ್‌ ಲೈನ್‌ ಮೂಲಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಲ್ಯಾಪ್‌ ಟಾಪ್‌, ಇಂಟರ್‌ನೆಟ್‌ ಮತ್ತು ಮೊಬೈಲ್‌ ಸೇರಿ ಅಗತ್ಯ ತಾಂತ್ರಿಕ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ನಗರದ ವಕೀಲ ಎ.ಎ. ಸಂಜೀವ್‌ ನರೇನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದಿಸಿ, ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ವಿಪರೀತ ಹೆಚ್ಚಾದ ಪರಿಣಾಮ ಸರ್ಕಾರದ ಬೊಕ್ಕಸ ಈಗಾಗಲೇ ಬರಿದಾಗಿದೆ. ಹೀಗಾಗಿ, ಅರ್ಜಿದಾರರ ಕೋರಿಕೆಯಂತೆ ಬಡ ವಿದ್ಯಾರ್ಥಿಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ಸೇರಿದಂತೆ ಅಗತ್ಯ ತಾಂತ್ರಿಕ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಕೋವಿಡ್‌ ಪ್ರಕರಣಗಳು ಹೆಚ್ಚಾದ ಕಾರಣ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಚಂದನ ವಾಹಿನಿ ಮೂಲಕ 5 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ಕಲ್ಪಿಸಲು ಅನುಕೂಲವಾಗುವಂತೆ ಅಗತ್ಯ ತಾಂತ್ರಿಕ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾಂತ್ರಿಕ ಸೌಲಭ್ಯ ಹೊಂದಿರದ ಮಕ್ಕಳಿಗೆ ಶಿಕ್ಷಣ ನೀಡಲು ರೂಪಿಸಿರುವ ವಿದ್ಯಾಗಮ ಯೋಜನೆಯನ್ನು ಪುನಾರಾರಂಭಿಸಲು ಸಾಧ್ಯವೇ ಎಂಬ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿತು.

ಅಲ್ಲದೆ, ಮಕ್ಕಳಿಗೆ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ಗಳನ್ನು ವಿತರಿಸಲು ಅನುಕೂಲವಾಗುವಂತೆ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌) ಮೂಲಕ ಸರ್ಕಾರ ಕಾರ್ಪೋರೇಟ್‌ ಕಂಪನಿಗಳಿಂದ ನಿಧಿ ಸಂಗ್ರಹಿಸಬಹುದು. ರಾಜ್ಯಸರ್ಕಾರಕ್ಕೆ ತೀವ್ರ ಆರ್ಥಿಕ ಸಂಕಷ್ಟಎದುರಾಗಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲರು ಹೇಳಿಕೆ ನೀಡಿರುವುದರಿಂದ ಈ ನಿರ್ದೇಶನ ನೀಡಲಾಗಿದೆ. ಒಂದೊಮ್ಮೆ ಸಿಎಸ್‌ಆರ್‌ ಮೂಲಕ ಹಣ ಸಂಗ್ರಹಿಸಲು ಸರ್ಕಾರ ಮುಂದಾದರೆ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ಸ್ಥಗಿತಗೊಳ್ಳುವುದಿಲ್ಲ ಎಂಬುದನ್ನು ಖಾತರಿ ಪಡಿಸಬೇಕು ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದೆ.

Thanks for reading ರಾಜ್ಯದಲ್ಲಿ ಮತ್ತೆ ವಿದ್ಯಾಗಮ' ಪುನಾರಂಭ ..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯದಲ್ಲಿ ಮತ್ತೆ ವಿದ್ಯಾಗಮ' ಪುನಾರಂಭ ..?

Post a Comment