ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ನಟ ದರ್ಶನ್​

December 26, 2020

 


ಬೆಂಗಳೂರು: ಮಾಗಡಿ ರಸ್ತೆಯ ಟೋಲ್​ಗೇಟ್ ಬಳಿ ಪ್ರತಿಷ್ಠಾಪಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಧ್ವಂಸಗೊಳಿಸಿದ್ದಕ್ಕೆ ಅವರ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ವಿಷ್ಣುದಾದಾರ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಯಾವುದೇ ವ್ಯಕ್ತಿಗೆ ಅಪಮಾನ ಆಗಬಾರದು. ವಿಷ್ಣು ಪುತ್ಥಳಿಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣ ಕೂಡ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗ ಸೇರಿದಂತೆ ಕನ್ನಡಿಗರೂ ಕೂಡ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಇದೀಗ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ವಿಷ್ಣು ಅವರಿಗೆ ಅಪಮಾನ ಮಾಡಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.'ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ. ವಿಷ್ಣು ಸರ್ ಪುತ್ಥಳಿಯನ್ನು ಕಿಡಿಗೇಡಿಗಳು ಯಾರೂ ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತಹ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ನಟ ದರ್ಶನ್​ ಟ್ವೀಟ್ ಮಾಡಿದ್ದಾರೆ.

ವಿಷ್ಣು ಅವರ ಅಳಿಯ ಅನಿರುದ್ಧ್​ ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಇಂಥ ಘಟನೆಗಳು ಮರುಕಳಿಸಬಾರದು. ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ವಿಷ್ಣುವರ್ಧನ್​​ ತೋರುತ್ತಿದ್ದ ಪ್ರೀತಿಯ ಕಾರಣಕ್ಕೆ ಅವರು ಇನ್ನೂ ಕೋಟ್ಯಂತರ ಅಭಿಮಾನಿಗಳ ಮನಸು-ಹೃದಯದಲ್ಲಿ ನೆಲೆಸಿದ್ದಾರೆ. ಅಭಿಮಾನಿಗಳು ಕೂಡ ಪ್ರೀತಿಯಿಂದ ನಡೆದುಕೊಳ್ಳಬೇಕು, ದ್ವೇಷ ಬೇಡ. ಇನ್ನು ಬೇರೆ ಕಡೆಯಲ್ಲಿ ಪುತ್ಥಳಿ ಸ್ಥಾಪನೆ ಬಗ್ಗೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅದರಂತೆ ಒಂದೊಳ್ಳೆಯ ಜಾಗದಲ್ಲಿ ಅದ್ದೂರಿಯಾಗಿಯೇ ಪುತ್ಥಳಿ ನಿರ್ಮಾಣವಾಗಲಿದೆ. ಆ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿವೆ' ಎಂದು ಅನಿರುದ್ಧ್​ ಹೇಳಿದ್ದಾರೆ.

ಇತ್ತೀಚೆಗಷ್ಟೇ ತೆಲಗು ಚಿತ್ರರಂಗದ ಹಿರಿಯ ನಟ ವಿಜಯ್​ ರಂಗರಾಜು, ವಿಷ್ಣುವರ್ಧನ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರು ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆಯಾಚಿಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳ ಮನ ನೋಯಿಸುವ ಮತ್ತೊಂದು ಘಟನೆ ನಡೆದಿದೆ.

Related Articles

Advertisement
Previous
Next Post »