ಕೊರೊನಾ ನಂತರ ಮಾರಕ "ಕಪ್ಪು ಶಿಲೀಂಧ್ರ" ರೋಗ; ಒಂಬತ್ತು ಮಂದಿ ಸಾವು

December 18, 2020

 


ಅಹಮದಾಬಾದ್, ಡಿಸೆಂಬರ್ 18: ಕೊರೊನಾ ಸೋಂಕಿನಿಂದ ಇನ್ನೇನು ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ವಿಚಿತ್ರ, ಹಾಗೆಯೇ ಮಾರಕ ರೋಗವೊಂದರ ಪ್ರಕರಣ ಹೆಚ್ಚಾಗುತ್ತಿದೆ. "ಮ್ಯೂಕೋರ್ಮೈಕೋಸಿಸ್" ಅಥವಾ "ಕಪ್ಪು ಶಿಲೀಂಧ್ರ" ಎಂಬ ರೋಗದಿಂದಾಗಿ ಅಹಮದಾಬಾದ್ ನಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಅಹಮದಾಬಾದ್ ನೊಂದಿಗೆ ದೆಹಲಿ, ಮುಂಬೈ ನಲ್ಲೂ ಈ ಸಮಸ್ಯೆ ಪತ್ತೆಯಾಗಿದೆ. ಕೊರೊನಾ ಸೋಂಕಿಗೂ, ಈ ಶಿಲೀಂಧ್ರ ಸೋಂಕಿಗೂ ಇರುವ ನಂಟಿನ ಕುರಿತು ತಾಳೆ ಹಾಕಲಾಗುತ್ತಿದೆ. ಏನಿದು ರೋಗ? ಏಕೆ ಈ ಸಮಸ್ಯೆ ಬರುತ್ತದೆ? ಮುಂದೆ ಓದಿ...


ಅಹಮದಾಬಾದ್ ನಲ್ಲಿ ಒಂಬತ್ತು ಮಂದಿ ಸಾವು

ಅಹಮದಾಬಾದ್ ನಲ್ಲಿ ಈಚೆಗೆ ಕಪ್ಪು ಶಿಲೀಂಧ್ರ ರೋಗದ 44 ಪ್ರಕರಣಗಳು ಪತ್ತೆಯಾಗಿವೆ.

ಈ 44 ಮಂದಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಕೆಲವು ಜನರು ಇದರಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಇದು ಕೊರೊನಾ ಸೋಂಕು ಪ್ರಚೋದಿತ ಪ್ರಕರಣಗಳೂ ಆಗಿವೆ ಎಂದು ಅಹಮದಾಬಾದ್ ನ ಸರ್ ಗಂಗಾರಾಮ್ ಆಸ್ಪತ್ರೆಯ ಇಎನ್ ಟಿ ಸರ್ಜನ್ ಗಳು ತಿಳಿಸಿದ್ದಾರೆ.

ಮ್ಯೂಕೋರ್ಮೈಕೋಸಿಸ್ ಎಂದರೆ ಏನು?


ಮ್ಯೂಕೋರ್ಮೈಕೋಸಿಸ್ ಶಿಲೀಂಧ್ರ ರೋಗವಾಗಿದ್ದು, ಅಪರೂಪದ ಹಾಗೆಯೇ ಗಂಭೀರ ಸೋಂಕಾಗಿದೆ. ಮ್ಯೂಕೋರ್ಮೈಕೋಸೈಟ್ ಶಿಲೀಂಧ್ರಗಳು ಹೆಚ್ಚಾಗಿ ಉಂಟಾಗುವ ಆರೋಗ್ಯ ಸಮಸ್ಯೆ ಇದಾಗಿದೆ. ಈ ಶಿಲೀಂಧ್ರಗಳು ನಮ್ಮ ಸುತ್ತಲಿನ ಪರಿಸರದಲ್ಲೇ ಇರುತ್ತವೆ. ಮೂಗಿನಲ್ಲಿ ಮೊದಲು ಸೋಂಕು ಆರಂಭಗೊಂಡು ಕಣ್ಣಿಗೆ ಹರಡುತ್ತದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ತಡೆಯಬಹುದು. ಇಲ್ಲದಿದ್ದರೆ ಸಾವಿಗೂ ಕಾರಣವಾಗುತ್ತದೆ. ಮೂಗಿನಿಂದ ಸೋಂಕು ಕಣ್ಣಿಗೆ ಹರಡುತ್ತಿದ್ದಂತೆ ಕಣ್ಣಿನ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳುತ್ತದೆ. ಇದು ದೃಷ್ಟಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಗಂಭೀರ ಪ್ರಕರಣದಲ್ಲಿ ಮೆದುಳಿನವರೆಗೂ ಹರಡಿ ಮೆದುಳು ಪೊರೆಯುರಿತ ಉಂಟಾಗುತ್ತದೆ. ಮೂಗು, ದವಡೆಯ ಮೂಳೆಯನ್ನೂ ತೆಗೆಯಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ.

ಸಮಸ್ಯೆ ಹೊಸತೇನಲ್ಲ...


ಈ ರೋಗ ಅಪರೂಪವಾಗಿದ್ದರೂ ಹೊಸತೇನಲ್ಲ. ಆದರೆ ಸದ್ಯಕ್ಕೆ ಹೊಸತೇನೆಂದರೆ, ಇದು ಕೊರೊನಾ ಪ್ರಚೋದಿತ ಎಂಬುದು ಎಂದಿದ್ದಾರೆ ಅಹಮದಾಬಾದ್ ಆಸ್ಪತ್ರೆಯ ವೈದ್ಯರು. ಈ ಕಪ್ಪು ಶಿಲೀಂಧ್ರ ರೋಗವು ಕಸಿಗೆ ಒಳಗಾಗುವ ರೋಗಿಗಳು, ಐಸಿಯುನಲ್ಲಿರುವ ಅಥವಾ ರೋಗನಿರೋಧಕ ಶಕ್ತಿ ಕುಂದಿದ ವ್ಯಕ್ತಿಗಳಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಆದರೆ ಕೊರೊನಾದಿಂದ ಗುಣಮುಖರಾಗುತ್ತಿರುವ ರೋಗಿಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆಸ್ಪತ್ರೆ ತಿಳಿಸಿದೆ.

ಹದಿನೈದು ದಿನಗಳಿಂದ ಕಾಣಿಸಿಕೊಂಡಿರುವ ಪ್ರಕರಣ


ಹಮದಾಬಾದ್ ನಲ್ಲಿ ಕಳೆದ ಹದಿನೈದು ದಿನಗಳಿಂದ ಈ ಪ್ರಕರಣ ಕಾಣಿಸಿಕೊಂಡಿದೆ. ದೆಹಲಿ, ಮುಂಬೈನಲ್ಲಿ ಪ್ರಕರಣಗಳು ಕಂಡುಬಂದಿವೆ. ಈ ಪ್ರಕರಣಗಳ ನಿಖರ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೆ ಈ ಸೋಂಕು ಅಂಟುರೋಗವಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ. ಈ ಮುನ್ನ ಈ ಪ್ರಕರಣಗಳು ಕಂಡಿರಲಿಲ್ಲ. ಮೂಗಿನಲ್ಲಿ ತೊಂದರೆ, ಕಣ್ಣು, ಕೆನ್ನೆಗಳಲ್ಲಿ ಊತ, ಮೂಗಿನಲ್ಲಿ ಕಪ್ಪು ಬಣ್ಣದ ಸಿಂಬಳ ಕಾಣಿಸಿಕೊಂಡರೆ ಕೂಸಲೇ ಪರೀಕ್ಷೆ ಮಾಡಿಸಿ ಎಂದು ವೈದ್ಯ ವರುಣ್ ರೈ ತಿಳಿಸಿದ್ದಾರೆ. ಸದ್ಯಕ್ಕೆ ಕಂಡುಬಂದಿರುವ ಪ್ರಕರಣಗಳಲ್ಲಿ ರೋಗಿಗಳೆಲ್ಲೂ 50 ವಯಸ್ಸಿನ ಮೇಲಿನವರಾಗಿದ್ದು, ಮಧುಮೇಹ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ತಿಳಿದುಬಂದಿದೆ.

Related Articles

Advertisement
Previous
Next Post »