ಗಂಡಸರಿಗೆ ಹೈಕೋರ್ಟ್ ಪಾಠ

December 25, 2020

 


ಬೆಂಗಳೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಸಬಲ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ಈಗಲೂ ಗೊತ್ತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆಯಲ್ಲದೆ, ಭಿನ್ನಾಭಿಪ್ರಾಯದ ಕಾರಣದಿಂದ ಕೇವಲ 2 ವರ್ಷಕ್ಕೇ ವೈವಾಹಿಕ ಜೀವನ ಮುರಿದುಕೊಳ್ಳಲು ಮುಂದಾಗಿರುವ ದಂಪತಿಗೆ ಬುದ್ದಿಮಾತು ಹೇಳಿದೆ.

ಸಮಾಜ ಮೊದಲಿನಿಂದಲೂ ಮಹಿಳೆಯನ್ನು ಕೀಳಾಗಿ ನಡೆಸಿಕೊಂಡು ಬಂದಿದೆ. ಸಬಲ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಪಾಲಕರು ತಮ್ಮ ಗಂಡು ಮಕ್ಕಳಿಗೆ ತಿಳಿಸಿಕೊಡುತ್ತಿಲ್ಲ.

ಇದೇ ಪುರುಷ ಪ್ರಧಾನ ಸಮಾಜದ ಸಮಸ್ಯೆಯಾಗಿದೆ ಎಂದು ನ್ಯಾಯ ಮೂರ್ತಿ ಬಿ.ವಿ.ನಾಗರತ್ನ ಹೇಳಿದರು.

ಮಹಿಳೆ ಪಾತ್ರವನ್ನೂ ವಿವರಿಸಿದ ಕೋರ್ಟ್: ಮಹಿಳೆ ಉತ್ತಮ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲಗೊಳ್ಳುವುದು ಒಳ್ಳೆಯದು. ಆದರೆ, ಇದೇ ಆಕೆಯ ವೈವಾಹಿಕ ಜೀವನಕ್ಕೆ ಮುಳುವಾಗಬಾರದು. ಆರ್ಥಿಕವಾಗಿ ಶಕ್ತಳಾದ ವಿದ್ಯಾವಂತ ಮಹಿಳೆ ತನ್ನ ಕುಟುಂಬದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೂ ಅರಿತುಕೊಳ್ಳಬೇಕು ಎಂದ ಪೀಠ, ಮನೆಗೆ ಸೊಸೆ ಬರುತ್ತಿದ್ದ ಹಾಗೆ ಅತ್ತೆ ಎನಿಸಿಕೊಂಡವರು ತಮ್ಮ ಮಗ ಹಾಗೂ ಸೊಸೆ ವಿಚಾರದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಬಾರದು ಎಂದೂ ಹೇಳಿತು. ಮಹಿಳೆಯ ಪರ ವಕೀಲರು, ಆಕೆ ತಂದೆ-ತಾಯಿಗೆ ಒಬ್ಬಳೇ ಮಗಳಾಗಿರುವುದರಿಂದ ಪತಿ ಹಾಗೂ ಆತನ ಕುಟುಂಬದ ಜತೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಒಬ್ಬಳೇ ಮಗಳಾಗಿ ಬೆಳೆದ ಮಾತ್ರಕ್ಕೆ ಪತಿಯನ್ನು ನಿರ್ಲಕ್ಷಿಸಬೇಕು ಎಂದರ್ಥವಲ್ಲ. ಮದುವೆ ಎಂದರೆ ಹೊಂದಾಣಿಕೆ. ಆ ಹೊಂದಾಣಿಕೆ ಗಂಡ-ಹೆಂಡತಿ ಇಬ್ಬರ ನಡುವೆಯೂ ಇರಬೇಕು. ನಿಮ್ಮಿಬ್ಬರ ನಡುವಿನ ಸೇತುವೆಯನ್ನು ನೀವಾಗಿಯೇ ಸುಟ್ಟು ಹಾಕಬೇಡಿ ಎಂದು ದಂಪತಿಗೆ ಕಿವಿಮಾತು ಹೇಳಿತು. ಬಳಿಕ ಇಬ್ಬರೂ ಆಪ್ತ ಸಮಾಲೋಚನೆಗೆ ತೆರಳಿ ಪರಸ್ಪರ ಮಾತುಕತೆ ನಡೆಸುವಂತೆ ಸೂಚಿಸಿ ವಿಚಾರಣೆಯನ್ನು ಜ.6ಕ್ಕೆ ಮುಂದೂಡಿತು.

Related Articles

Advertisement
Previous
Next Post »