ಸುದ್ದಿ ಲೋಕ

BIG NEWS: ಗಮನಿಸಿ..! ನಿಮ್ಮ ಜೀವನದಲ್ಲಿ ಹೊಸ ವರ್ಷದಿಂದ ಬದಲಾವಣೆ ತರಲಿವೆ ಈ ನಿಯಮಗಳು

 

ಹೊಸ ವರ್ಷದಿಂದ ಮೊದಲ ದಿನದಿಂದಲೇ ಜನಸಾಮಾನ್ಯರ ದೈನಂದಿನ ಬದುಕುಗಳ ಮೇಲೆ ಪರಿಣಾಮ ಉಂಟು ಮಾಡಬಲ್ಲ ಅನೇಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ.

ಅವುಗಳಲ್ಲಿ ಕೆಲವೊಂದು ಇಂತಿವೆ:

ಚೆಕ್ ಪಾವತಿ

50 ಸಾವಿರ ರೂ.ಗಳ ಮೇಲ್ಪಟ್ಟು ಪಾವತಿಗಳನ್ನು ಚೆಕ್ ಮೂಲಕ ಮಾಡುವುದಾದಲ್ಲಿ, ಜನವರಿ 1ರಿಂದ ಜಾರಿಗೆ ಬರುವಂತೆ, ಗ್ರಾಹಕರಿಂದ ಚೆಕ್ ಮೇಲೆ ಮರು-ಖಾತ್ರಿಯ ಅಗತ್ಯ ಬೀಳಬಹುದು. ಬ್ಯಾಂಕುಗಳಲ್ಲಿ ನಡೆಯುವ ಆರ್ಥಿಕ ಅಕ್ರಮಗಳಿಗೆ ಬ್ರೇಕ್ ಹಾಕಲೆಂದು, 5 ಲಕ್ಷ ರೂಗಳ ಮೇಲ್ಪಟ್ಟ ಚೆಕ್ ವ್ಯವಹಾರಗಳಿಗೆ ಈ ನಿಯಮವನ್ನು ಕಡ್ಡಾಯ ಮಾಡಲು ಆರ್‌ಬಿಐ ಚಿಂತನೆ ನಡೆಸುತ್ತಿದೆ.

ಕಾಂಟಾಕ್ಟ್‌ಲೆಸ್ ಪಾವತಿ

ಜನವರಿ 1ರಿಂದ ಜಾರಿಗೆ ಬರುವಂತೆ, ಯುಪಿಐ ಹಾಗೂ ಕಾರ್ಡ್‌ಗಳ ಮೂಲಕ ಮಾಡುವ ಪಾವತಿಯ ಗರಿಷ್ಠ ಮಿತಿಯನ್ನು ಎರಡು ಸಾವಿರ ರೂಗಳಿಂದ ಐದು ಸಾವಿರ ರೂಗಳಿಗೆ ಏರಿಕೆ ಮಾಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಸಾಂಕ್ರಮಿಕದಂಥ ಪರಿಸ್ಥಿತಿಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗಳು ಇನ್ನಷ್ಟು ಪ್ರಸ್ತುತವಾಗುತ್ತಿರುವ ಕಾರಣದಿಂದಾಗಿ ಈ ಸೌಲಭ್ಯದ ಬಳಕೆಗೆ ಉತ್ತೇಜನ ನೀಡಲು ಆರ್‌ಬಿಐ ಮುಂದಾಗಿದೆ.


ವಾಟ್ಸಾಪ್‌ ಸೇವೆ

ಆಂಡ್ರಾಯ್ಡ್‌ನ 4.0.3 ಅಥವಾ ಹೊಸ ಅವತರಣಿಕೆಯ ಒಎಸ್‌ ಹಾಗೂ ಐಫೋನ್‌ನ ಐಒಎಸ್‌ 9ಗಿಂತ ವಿನೂತನವಾ‌ದ ಒಎಸ್‌ಗಳಲ್ಲಿ ಮಾತ್ರವೇ ವಾಟ್ಸಾಪ್ ಕಾರ್ಯ ನಿರ್ವಹಣೆ ಮಾಡಲಿದೆ.

ಕಾರುಗಳ ಬೆಲೆ

ದೇಶೀ ಕಾರು ಉತ್ಪಾದಕರಾದ ಮಾರುತಿ ಸುಜುಕಿ, ಮಹಿಂದ್ರಾ & ಮಹಿಂದ್ರಾಗಳ ಕಾರುಗಳ ಬೆಲೆಯಲ್ಲಿ ಜನವರಿ 1ರಿಂದ ಏರಿಕೆಯಾಗಲಿದೆ.

ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆಗಳು

ಟೆಲಿಕಾಂ ನಿಯಂತ್ರಕ ಟ್ರಾಯ್ ಸೂಚನೆಯಂತೆ ಇನ್ನು ಮುಂದೆ ಲ್ಯಾಂಡ್‌ಲೈನ್‌ಗಳಿಂದ ಮೊಬೈಲ್‌ಗೆ ಕರೆ ಮಾಡುವಾಗ ಗ್ರಾಹಕರ ದೂರವಾಣಿ ಸಂಖ್ಯೆಯ ಮುಂದೆ ‘0’ ಸೇರಿಸಿಕೊಳ್ಳಬೇಕಾಗುತ್ತದೆ.

ಫಾಸ್ಟ್ಯಾಗ್‌ ಕಡ್ಡಾಯ

ದೇಶಾದ್ಯಂತ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಜನವರಿ 1, 2021ರಿಂದ ಫಾಸ್ಟ್ಯಾಗ್‌ ಅಳವಡಿಕೆ ಕಡ್ಡಾಯವೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಡಿಸೆಂಬರ್‌ 1, 2017ರ ಮುನ್ನ ಮಾರಾಟವಾದ ಎಂ ಹಾಗೂ ಎನ್‌ ಕ್ಲಾಸ್‌ಗಳ ಎಲ್ಲಾ ನಾಲ್ಕು ಚಕ್ರಗಳ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ಈ ಸಂಬಂಧ ಕೇಂದ್ರ ಮೋಟಾರು ವಾಹನ ಕಾಯಿದೆ 1989ಕ್ಕೆ ಮಹತ್ವದ ತಿದ್ದುಪಡಿ ತರಲಾಗಿದೆ.

ಯುಪಿಐ ಪಾವತಿ

ಜನವರಿ 1, 2021ರಿಂದ ಅನ್ವಯವಾಗುವಂತೆ ಅಮೇಜಾನ್ ಪೇ, ಗೂಗಲ್ ಪೇ ಹಾಗೂ ಫೋನ್‌ ಪೇಗಳ ಮೂಲಕ ಮಾಡುವ ವ್ಯವಹಾರಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆಗಳಿದ್ದು, ಈ ಹೊರೆಯನ್ನು ಬಳಕೆದಾರರು ಭರಿಸಬೇಕಾಗಿ ಬರುತ್ತದೆ. ಮೂರನೇ ಪಾರ್ಟಿ ಪ್ಲಾಟ್‌ಫಾರಂಗಳ ಮೂಲಕ ಮಾಡುವ ಡಿಜಿಟಲ್ ಪಾವತಿಗಳ ಮೇಲೆ ಈ ಶುಲ್ಕ ವಿಧಿಸಲು ಎನ್‌ಪಿಸಿಐ ಮುಂದಾಗಿದೆ.

ಗೂಗಲ್ ಪೇ

ಜನವರಿ 1ರಿಂದ ಗೂಗಲ್‌ ಪೇನ ಜಾಲತಾಣ ಆಧರಿತ ಕಿರು ತಂತ್ರಾಂಶ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಇಷ್ಟು ದಿನಗಳ ಕಾಲ ಗೂಗಲ್‌ನ ಕಿರು ತಂತ್ರಾಂಶ ಹಾಗೂ ಜಾಲತಾಣಗಳ ಮೂಲಕ ಹಣ ಕಳುಹಿಸಲು ಗ್ರಾಹಕರು ಸಫಲರಾಗಿದ್ದರು. ಆದರೆ ಇನ್ನು ಮುಂದೆ ಗೂಗಲ್‌ನ ಜಾಲತಾಣ ಸೇವೆಗಳು ಕೆಲಸ ಮಾಡುವುದಿಲ್ಲ.

ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು

ಜಾಗತಿಕ ಮಾರುಕಟ್ಟೆಗಳ ಟ್ರೆಂಡ್ ಆಧರಿಸಿ ತೈಲ ಕಂಪನಿಗಳು ಇನ್ನು ಮುಂದೆ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿಗದಿ ಪಡಿಸಲಿವೆ.

ಜಿಎಸ್‌ಟಿ

ಐದು ಕೋಟಿ ರೂಗಳನ್ನು ಮೀರಿದ ಟರ್ನ್‌ಓವರ್‌ ಇರುವ ವ್ಯವಹಾರಗಳು ಇನ್ನು ಮುಂದೆ ಜಿಎಸ್‌ಟಿ ರಿಟರ್ನ್ಸ್ 3ಬಿ ಅಥವಾ ಜಿಎಸ್‌ಟಿ ಮಾರಾಟ ರಿಟರ್ನ್ಸ್‌ಅನ್ನು ನಾಲ್ಕು ಬಾರಿ ಫೈಲ್ ಮಾಡಿದರೆ ಸಾಕು. ಇಲ್ಲಿವರೆಗೂ 12 ಬಾರಿ ಜಿಎಸ್‌ಟಿ ರಿಟರ್ನ್ಸ್‌ಅನ್ನು ಈ ಬಗೆಯ ವ್ಯವಹಾರಗಳಿಗೆ ಸಲ್ಲಿಸಬೇಕಾಗಿತ್ತು. ಈ ಸುಧಾರಣೆಯಿಂದಾಗಿ 94 ಲಕ್ಷ ತೆರಿಗೆ ಪಾವತಿದಾರರು ಹಾಗೂ ಜಿಎಸ್‌ಟಿ ಪಾವತಿರದಾರರ ಪೈಕಿಯ 92 ಪ್ರತಿಶತ ಮಂದಿಯ ಮೇಲೆ ಪರಿಣಾಮ ಉಂಟಾಗಲಿದೆ.

Leave a Reply

Your email address will not be published.