ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿ ರಹಿತ ಸಾಲ

December 20, 2020
Sunday, December 20, 2020

 


ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಇತರೆ ಯಾವುದೇ ಸಮಗ್ರ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಗರಿಷ್ಠ ₹7.5ಲಕ್ಷದವರೆಗೆ ಬಡ್ಡಿರಹಿತ ಸಾಲ ಸಿಗಲಿದೆ. ಈ ಸೌಲಭ್ಯ ಪಡೆಯಲು ಯಾವುದೇ ಪೂರಕ ಭದ್ರತೆ (ಕೊಲ್ಯಾಟರಲ್‌ ಸೆಕ್ಯುರಿಟಿ) ಒದಗಿಸಬೇಕಾದ ಅಗತ್ಯವೂ ಇಲ್ಲ. ಮೂರನೇ ವ್ಯಕ್ತಿಯ ಭದ್ರತೆ ಒದಗಿಸಬೇಕಾಗಿಯೂ ಇಲ್ಲ.

ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ (ಸಿಎಸ್‌ಐಎಸ್‌) ಅಡಿ ಈ ಸೌಲಭ್ಯ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಈ ಸಿಎಸ್‌ಐಎಸ್‌ ಯೋಜನೆಯನ್ನು ಪರಿಚಯಿಸಿದೆ. ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಸಾಲ ಪಡೆಯಬಹುದು.

ಈ ಮುನ್ನ, ನ್ಯಾಕ್‌, ಎನ್‌ಬಿಐ, ಸಿಎಫ್‌ಟಿಐ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಿಎಸ್‌ಐಎಸ್‌ ಅಡಿ ಈ ಸೌಲಭ್ಯ ಸಿಗುತ್ತಿತ್ತು.

ಅಲ್ಲದೆ, ಸಾಲ ತೆಗೆದುಕೊಳ್ಳಲು ‍ಪೂರಕ ಭದ್ರತೆ ನೀಡಬೇಕಿತ್ತು. ಬಡ್ಡಿಯನ್ನೂ ವಿಧಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿ ಡಾ. ರಾಮಮನೋಹರ್‌ ಲೋಹಿಯಾ ಚಿಂತಕರ ವೇದಿಕೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, 'ಈ ಯೋಜನೆಯ ಪ್ರಯೋಜನವನ್ನು ಯಾವುದೇ ತಾರತಮ್ಯ ಇಲ್ಲದೆ ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು' ಎಂದು ಡಿ.4ರಂದು ಆದೇಶಿಸಿದೆ.

'ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ, ಯಾವುದೇ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಶೇ 90ರಷ್ಟು ಪೋಷಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ' ಎಂದು ವೇದಿಕೆಯ ಅಧ್ಯಕ್ಷ ಬಿ.ಎಸ್. ಶಿವಣ್ಣ 'ಪ್ರಜಾವಾಣಿ'ಗೆ ತಿಳಿಸಿದರು.

ಸಿಎಸ್‌ಐಎಸ್‌ ಯೋಜನೆ
ಯಾರು ಅರ್ಹರು?: 
ಆರ್ಥಿಕವಾಗಿ ಹಿಂದುಳಿದಿರುವ, ಅಂದರೆ ಕುಟುಂಬದ ವಾರ್ಷಿಕ ಆದಾಯ ₹4.5ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು. ಕಾನೂನು, ಎಂಜಿನಿಯರಿಂಗ್‌, ನರ್ಸಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಯಾವುದೇ ಕೋರ್ಸ್‌ ಮಾತ್ರವಲ್ಲದೆ, ಸಂಶೋಧನಾ ವಿದ್ಯಾರ್ಥಿಗಳೂ ಅರ್ಹರು.

ಸೌಲಭ್ಯಗಳೇನು?: ಭದ್ರತೆ ಇಲ್ಲದೆ, ಬಡ್ಡಿರಹಿತವಾಗಿ ಗರಿಷ್ಠ ₹7.5 ಲಕ್ಷದವರೆಗೆ ಸಾಲ. ವಿದ್ಯಾರ್ಥಿಗಳ ವ್ಯಾಸಂಗ ಮಾಡುವ ಕೋರ್ಸ್‌ನ ಅವಧಿ ಮತ್ತು ನಂತರದ ಒಂದು ವರ್ಷ ಅವಧಿಗೆ ಕೇಂದ್ರ ಸರ್ಕಾರವೇ ಬಡ್ಡಿ ಪಾವತಿಸುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?: ಕೆನರಾ ಬ್ಯಾಂಕ್‌ ಈ ಯೋಜನೆಯ ನೋಡಲ್‌ ಬ್ಯಾಂಕ್. ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕೋರ್ಸ್‌ಗೆ ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಪ್ರಾಧಿಕಾರ ಅಥವಾ ಮಂಡಳಿಗಳು ಈ ಅರ್ಜಿಯನ್ನು ಪುರಸ್ಕರಿಸಿ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಅರ್ಜಿಗಳನ್ನು ರವಾನಿಸುತ್ತವೆ ಮತ್ತು ವಿದ್ಯಾರ್ಥಿಗಳಿಗೆ ಅನುಮೋದನೆ ಪತ್ರ ನೀಡುತ್ತವೆ.

ಉದಾಹರಣೆಗೆ, ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿರುವವರು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾಗೆ, ವೈದ್ಯಕೀಯ ಪದವಿ ಅಧ್ಯಯನ ಮಾಡುತ್ತಿರುವವರು ಭಾರತೀಯ ವೈದ್ಯಕೀಯ ಮಂಡಳಿಗೆ ಅರ್ಜಿ ಸಲ್ಲಿಸಿ, ಪ್ರಮಾಣಪತ್ರ ಪಡೆದು, ಕೆನರಾ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಕೊಡಬೇಕು.


Thanks for reading ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿ ರಹಿತ ಸಾಲ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿ ರಹಿತ ಸಾಲ

Post a Comment