ಮುಷ್ಕರದಿಂದ 4 ದಿನದಲ್ಲಿ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು?

December 15, 2020

 


ಬೆಂಗಳೂರು, ಡಿಸೆಂಬರ್ 15: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕು ದಿನಗಳ ಅವಧಿ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಸೋಮವಾರ ಸಾರಿಗೆ ಇಲಾಖೆ ಸಿಬ್ಬಂದಿ ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿದಿವೆ. ಇದೀಗ ಮುಷ್ಕರದಿಂದ ಸಾರಿಗೆ ಇಲಾಖೆಯ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 64 ಕೋಟಿ ರೂಪಾಯಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಕೊರೊನಾ ಲಾಕ್ ಡೌನ್ ನಂತರ ಇತ್ತೀಚೆಗಷ್ಟೇ ಸಾರಿಗೆ ಇಲಾಖೆ ಚೇತರಿಸಿಕೊಳ್ಳುತ್ತಿತ್ತು

ಮುಷ್ಕರದಿಂದ ಮತ್ತೆ ಹೊಡೆತ ಬಿದ್ದಿದ್ದು, ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ನಾಲ್ಕು ದಿನಗಳ ಮುಷ್ಕರದಿಂದ ಬಿಎಂಟಿಸಿಗೆ 10 ಕೋಟಿ ರೂ ನಷ್ಟವುಂಟಾಗಿದ್ದರೆ, ಕೆಎಸ್‌ಆರ್ ಟಿಸಿಗೆ 21 ಕೋಟಿ ರೂ ನಷ್ಟ ಸಂಭವಿಸಿದೆ. ಜೊತೆಗೆ ಮುಷ್ಕರದಿಂದಾಗಿ ರಾಜ್ಯಾದ್ಯಂತ 41 ಕೆಎಸ್‌ಆರ್ ಟಿಸಿ ಬಸ್ ಗಳಿಗೆ ಹಾನಿಯಾಗಿದೆ.ಕೆ ಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಾಲ್ಕು ನಿಗಮಗಳಿಗೆ ಒಟ್ಟು 64 ಕೋಟಿ ನಷ್ಟ ಸಂಭವಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪನಾ ನಿರ್ದೇಶಜ ಶಿಖಾ ಹಾಗೂ ಕೆಎಸ್ ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸಾರಿಗೆ ಇಲಾಖೆಯ ನಾಲ್ಕು ನಿಗಮದಲ್ಲಿ ಒಟ್ಟು ಒಂದು ಲಕ್ಷದ ಮೂವತ್ತು ಸಾವಿರ ನೌಕರರಿದ್ದಾರೆ. ಪ್ರತಿದಿನ ಆರು ಸಾವಿರ ಕೆಎಸ್ ಆರ್ ಟಿಸಿ ಬಸ್ಸುಗಳು ಸಂಚರಿಸುತ್ತವೆ. ಇದರಿಂದ ನಿತ್ಯ ಸುಮಾರು 7 ಕೋಟಿ ರೂ ಆದಾಯ ಬರುತ್ತಿತ್ತು. ನಿತ್ಯ ಸುಮಾರು 5000 ಬಿಎಂಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ದಿನವೂ ಸುಮಾರು 2.5 ಕೋಟಿ ರೂ ಆದಾಯ ಬರುತ್ತಿತ್ತು. ಇದೀಗ 10 ಕೋಟಿ ನಷ್ಟವಾಗಿದೆ.

ಇದರೊಂದಿಗೆ ನಿತ್ಯ 3,775 ಎನ್ ಇಕೆಆರ್ ಟಿಸಿ ಬಸ್ಸುಗಳು ಓಡಾಡುತ್ತಿದ್ದು, 4 ಕೋಟಿ ಸಂಗ್ರಹವಾಗುತ್ತಿತ್ತು. 3.402 ಎನ್ ಡಬ್ಲುಆರ್ ಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, 4 ಕೋಟಿ 20 ಲಕ್ಷ ರೂ ಆದಾಯ ಬರುತ್ತಿತ್ತು. ಮುಷ್ಕರದಿಂದಾಗಿ ಸಾಕಷ್ಟು ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದೆ.Related Articles

Advertisement
Previous
Next Post »