ಬೆಂಗಳೂರು: ಇತ್ತ ರಾಜ್ಯದಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿ 1ರಿಂದ ಶಾಲೆಯನ್ನು ತೆರೆಯುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವ ಬೆನ್ನಲ್ಲೇ ಇದೀಗ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆನ್ಲೈನ್, ಆಫ್ಲೈನ್ ಎಲ್ಲವನ್ನೂ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (RECOGNIZED UNAIDED PRIVATE SCHOOLS ASSOCIATION-RUPSA) ಇದರ ಅಡಿ ಬರುವ ಎಲ್ಲಾ ಶಾಲೆಗಳ ಆನ್ಲೈನ್ ಮತ್ತು ಆಫ್ಲೈನ್ ಕ್ಲಾಸ್ಗಳನ್ನು ನಾಳೆಯಿಂದಲೇ ಅಂದರೆ ಸೋಮವಾರದಿಂದಲೇ (ಡಿ.21) ಸ್ಥಗಿತಗೊಳಿಸಲಾಗುವುದು ಎಂದು ಒಕ್ಕೂಟ ಹೇಳಿದೆ.
ಈ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ 12,800 ಶಾಲೆಗಳಲ್ಲಿ ನಾಳೆಯಿಂದ ಯಾವುದೇ ತರಗತಿಗಳು ನಡೆಯುವುದಿಲ್ಲ.
ಅಷ್ಟಕ್ಕೂ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ಒಕ್ಕೂಟದ 15 ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲವಂತೆ.
ಈ ಕುರಿತು ಮಾತನಾಡಿರುವ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳ ಶಾಲೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇವತ್ತು ಹಲವಾರು ಸಮ್ಯಸೆಗಳ ಬಗ್ಗೆ ವಿಸ್ತೃತ ವಾಗಿ ಚರ್ಚೆ ಮಾಡಿದ್ದೇವೆ. ನಮ್ಮ ಯಾವ ಬೇಡಿಕೆಗಳನ್ನು ಈಡೇರದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ಪಠ್ಯಕ್ರಮದ ಬಗ್ಗೆ ಘೋಷಿಸುವಂತೆ ಕೇಳಿದ ನಮ್ಮ ಮನವಿಗೆ ಪ್ರತಿಕ್ರಿಯೆ ಬಂದಿಲ್ಲ. ಖಾಸಗಿ ಶಾಲೆಗಳಿಗೆ ಪರಿಹಾರ ನೀಡುವಂತೆ ಮಾಡಿಕೊಂಡ ಮನವಿ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಲಿಲ್ಲ. ನಮ್ಮ ಒಕ್ಕೂಟದ ಅಡಿ ಸುಮಾರು 5 ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಎಂದು ಅವರು ಹೇಳಿದರು.
ನಾವು ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಶಾಲೆ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅನುದಾನಿತ ಶಾಲೆಗಳು ರಾಜ್ಯ ಸರ್ಕಾರವನ್ನ ಬೆಂಬಲಿಸುತ್ತಿವೆ. ಬೆಂಗಳೂರಿನಲ್ಲಿರುವುದು ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು. ಇದಕ್ಕೆ ಹಳ್ಳಿಯ ಶಾಲೆಗಳು ಯಾವುದೇ ಬೆಂಬಲ ನೀಡಿಲ್ಲ ಎಂದು ತಾಳಿಕೋಟೆ ಹೇಳಿದರು.
EmoticonEmoticon