ತಾಜಾ ಸುದ್ದಿ

ಸಮೀಕ್ಷೆ: ಭಾರತದಲ್ಲಿ ಅತಿಹೆಚ್ಚು ಪುರುಷರು, ಮಹಿಳೆಯರು ಮದ್ಯ ಸೇವನೆ ಮಾಡುವ ರಾಜ್ಯಗಳ ಪಟ್ಟಿ

 

ಮದ್ಯದ ಗಮ್ಮತ್ತು ಯಾವ ರಾಜ್ಯದಲ್ಲಿ ಜೋರಾಗಿದೆ, ಯಾವ ರಾಜ್ಯದಲ್ಲಿ ಮಹಿಳೆಯರು, ಪುರುಷರನ್ನು ಮೀರಿಸುತ್ತಿದ್ದಾರೆ ಎನ್ನುವ ಸಮೀಕ್ಷೆಯೊಂದು ಹೊರಗೆ ಬಿದ್ದಿದೆ. ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳಿದ್ದು, ಕೆಲವೊಂದು ರಾಜ್ಯಗಳಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಮದ್ಯದ ದಾಸರಾಗಿದ್ದಾರೆ.

ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶವೇನಂದರೆ, ಭಾರತದ ಒಂದು ರಾಜ್ಯದಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ. ಆದರೆ, ಆ ರಾಜ್ಯದವರೇ ಮದ್ಯವನ್ನು ಅತಿಹೆಚ್ಚು ಸೇವಿಸುತ್ತಿದ್ದಾರೆ. ಹಾಗಾದರೆ, ಅವರಿಗೆ ಮದ್ಯ ಸಿಗುತ್ತಿರುವುದು ಎಲ್ಲಿಂದ ಎನ್ನುವ ಪ್ರಶ್ನೆಗೆ ಆಯಾಯ ಸರಕಾರ ಉತ್ತರಿಸಬೇಕಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆಯ 2019-20ರ ಸಮೀಕ್ಷೆಯಲ್ಲಿ ಮದ್ಯದ ಜೊತೆಗೆ, ತಂಬಾಕು ಪದಾರ್ಥಗಳನ್ನು ಯಾವ ರಾಜ್ಯದ ಜನರು ಹೆಚ್ಚು ಸೇವಿಸುತ್ತಾರೆ ಎನ್ನುವ ಅಂಶವೂ ಇದೆ.

ಅತಿಹೆಚ್ಚು ಮದ್ಯಸೇವನೆಯಾಗುತ್ತಿರುವ ರಾಜ್ಯ ಎನ್ನುವ ಖ್ಯಾತಿಯೋ, ಕುಖ್ಯಾತಿಯೋ ದಕ್ಷಿಣ ಭಾರತದ ರಾಜ್ಯವೊಂದರದ್ದಾಗಿದೆ.

ಮದ್ಯದ ವಿಚಾರ ಬಂದಾಗ ಆ ಪಟ್ಟಿಯಲ್ಲಿ ಗೋವಾ ರಾಜ್ಯವೋ ಅಥವಾ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಇರಬಹುದು ಎನ್ನುವ ಗ್ರಹಿಕೆ ತಪ್ಪು ಎನ್ನುವುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಮುಂದೆ ಓದಿ..

ಕೇಂದ್ರ ಆರೋಗ್ಯ ಸಚಿವಾಲಯ

ಎರಡು ದಿನದ ಹಿಂದೆ, ಕೇಂದ್ರ ಆರೋಗ್ಯ ಸಚಿವಾಲಯದ ವ್ಯಾಪ್ತಿಯ ಕುಟುಂಬ ಕಲ್ಯಾಣ ಇಲಾಖೆ ಈ ಸಮೀಕ್ಷೆಯನ್ನು ಪ್ರಕಟಿಸಿದೆ. ಮದ್ಯದ ಉತ್ಪಾದನೆ, ಮಾರಾಟ, ಆಮದು ಬಿಹಾರದಲ್ಲಿ ನಿಷೇಧವಾಗಿದ್ದರೂ, ಅಲ್ಲಿ ಮದ್ಯದ ದಾಸರು ಮಹಾರಾಷ್ಟ್ರಗಿಂತ ಜಾಸ್ತಿ ಎನ್ನುವ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಮದ್ಯ ಮಾರಾಟಕ್ಕೆ ನಿಷೇಧವಿರುವ ಬಿಹಾರ

ಬಿಹಾರದಂತೆ ಮದ್ಯ ಮಾರಾಟಕ್ಕೆ ನಿಷೇಧವಿರುವ ದೇಶದ ಇನ್ನೊಂದು ರಾಜ್ಯವೆಂದರೆ ಅದು ಗುಜರಾತ್. ಆದರೆ, ಅಲ್ಲಿನ ಪುರುಷರು ಮದ್ಯದ ಚಟಕ್ಕೆ ಬಿದ್ದವರ ಪಟ್ಟಿಯಲ್ಲಿ ಅತಿಕಮ್ಮಿ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಜಮ್ಮು ಮತ್ತು ಕಾಶ್ಮೀರ ಕೂಡಾ. ಹಾಗೆಯೇ, ನಗರ ಪ್ರದೇಶಕ್ಕೆ ಹೋಲಿಸಿದರೆ, ಗ್ರಾಮೀಣ ಭಾಗದಲ್ಲಿ ಎಣ್ಣೆ ಹೊಡೆಯುವವರ ಸಂಖ್ಯೆ ಹೆಚ್ಚು.

ಅತಿಹೆಚ್ಚು ಮಹಿಳೆಯರು ಮದ್ಯ ಸೇವಿಸುವ ರಾಜ್ಯಗಳು

ಹದಿನೈದು ವರ್ಷದವರ ಮೇಲ್ಪಟ್ಟವರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಿಕ್ಕಿಂನಲ್ಲಿ ಅತಿಹೆಚ್ಚು ಮಹಿಳೆಯರು (ಶೇ. 16.2) ಮದ್ಯ ಸೇವಿಸಿದರೆ, ಅಸ್ಸಾಂನಲ್ಲಿ ಇದರ ಪ್ರಮಾಣ ಶೇ. 7.3. ಇನ್ನು ಮಣಿಪುರ ರಾಜ್ಯದಲ್ಲಿ ಇದರ ಪ್ರಮಾಣ ಶೇ. 0.9, ತೆಲಂಗಾಣದಲ್ಲಿ ಶೇ. 6.7 ಮತ್ತು ಗೋವಾದಲ್ಲಿ ಶೇ. 5.5.

ಮದ್ಯ ಸೇವಿಸುವ ರಾಜ್ಯವೆಂದರೆ ಅದು ತೆಲಂಗಾಣ

ಪುರುಷರು ಅತಿಹೆಚ್ಚು ಮದ್ಯ ಸೇವಿಸುವ ರಾಜ್ಯವೆಂದರೆ ಅದು ತೆಲಂಗಾಣ. ಅಲ್ಲಿ ಶೇ. 43.3, ಸಿಕ್ಕಿಂ ನಲ್ಲಿ ಶೇ. 39.8, ಮಣಿಪುರದಲ್ಲಿ ಶೇ. 37.5, ಗೋವಾದಲ್ಲಿ ಶೇ. 36.9ರಷ್ಟು ಮಂದಿ ಮದ್ಯದ ಚಟಕ್ಕೆ ಬಿದ್ದಿದ್ದಾರೆ. ಒಟ್ಟಾರೆ ಈ ಸಮೀಕ್ಷೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಅಂಶ ಹೊರಬಿದ್ದಿಲ್ಲ.

Leave a Reply

Your email address will not be published.