ಶಿಕ್ಷಣ ಸುದ್ದಿ

ಈ ಬಾರಿ ಬೇಸಿಗೆ ರಜೆ ಕಡಿತಕ್ಕೆ ಶಿಕ್ಷಣ ಇಲಾಖೆ ಚಿಂತನೆ

 

ಬೆಂಗಳೂರು, ಡಿ.15: ರಾಜ್ಯದಲ್ಲಿ ಶಾಲೆಗಳ ಆರಂಭಿಸುವ ಸಂಬಂಧ ಶೀಘ್ರದಲ್ಲಿಯೇ ಸರಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅದರ ನಡುವೆ ಈ ಶೈಕ್ಷಣಿಕ ವರ್ಷದಲ್ಲಿ ಬೇಸಿಗೆ ರಜೆ ಕಡಿತಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಂತನೆ ನಡೆಸಿದೆ.

ಜನವರಿಯಿಂದ ಶೈಕ್ಷಣಿಕ ವರ್ಷ ಅಧಿಕೃತವಾಗಿ ಆರಂಭವಾಗಬಹುದು ಎನ್ನಲಾಗಿದ್ದು, ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಬಹುತೇಕ ಪಠ್ಯಗಳನ್ನು ಪೂರ್ಣಗೊಳಿಸಬೇಕಿದ್ದು, ಬೇಸಿಗೆ ರಜೆ ನೀಡದಿರುವುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಸರಕಾರ ಈ ಬಗ್ಗೆ ಅಧಿಕೃತವಾಗಿ ನಿರ್ಣಯ ಕೈಗೊಂಡು ಪ್ರಕಟ ಮಾಡಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೋನದಿಂದ ಈ ವರ್ಷ ತರಗತಿಗಳು ನಡೆದಿಲ್ಲ. ವಿದ್ಯಾಗಮ ಸ್ಥಗಿತಗೊಂಡಿದೆ. ಪರಿಷ್ಕೃತ ರೂಪದಲ್ಲಿ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ, ಆದರೆ ನಿರ್ಧಾರ ಹೊರಬಿದ್ದಿಲ್ಲ.

ಸರಕಾರಿ ಶಾಲಾ ಮಕ್ಕಳಿಗೆ ಸೀಮಿತ ಅವಧಿಯಲ್ಲಿ ಪಠ್ಯ ಪೂರ್ಣಗೊಳಿಸ ಬೇಕಿರುವುದರಿಂದ ಬೇಸಿಗೆ ರಜೆ ಕಡಿತ ಅನಿವಾರ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಕೆಲವು ದಿನವಾದರೂ ರಜೆ ಅಗತ್ಯ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪರಿಸ್ಥಿತಿ ಭಿನ್ನವಾಗಿರುವ ಹಿನ್ನೆಲೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡು ತರಗತಿಗಳು ನಡೆಸಬೇಕಾಗಿರುತ್ತದೆ. ಆದರೆ, ವಿದ್ಯಾರ್ಥಿಗಳ ವಯೋಮಾನಕ್ಕೆ ತಕ್ಕಂತೆ ಬೋಧನೆ ಅಗತ್ಯ. ಮಕ್ಕಳ ಬೌದ್ಧಿಕ, ಮಾನಸಿಕ ಸಾಮರ್ಥ್ಯವನ್ನು ಆಧರಿಸಿಬೇಕಾಗುತ್ತದೆ. ಹೀಗಾಗಿ, ಬೇಸಿಗೆ ರಜೆ ಸಂಪೂರ್ಣ ಕಡಿತ ಸಲ್ಲ. ಕನಿಷ್ಠ ದಿನಗಳನ್ನಾದರೂ ರಜೆ ನೀಡಬೇಕಾದ ಅಗತ್ಯವಿದೆ ಎಂದು ಶಿಕ್ಷಕರ ಸಂಘ ಒತ್ತಾಯ ಮಾಡಿದೆ.

Leave a Reply

Your email address will not be published.