ಬೆಂಗಳೂರು,ಡಿ.16- ಶಾಲಾಕಾಲೇಜುಗಳನ್ನು ಮುಚ್ಚಿರುವುದರಿಂದ ಬಾಲ್ಯ ವಿವಾಹ ಸೇರಿದಂತೆ ಅನೇಕ ದುಷ್ಪರಿಣಾಮಗಳು ಆಗುತ್ತವೆ. ಇಂದಿನಿಂದಲೇ ಶಾಲಾಕಾಲೇಜುಗಳನ್ನು ಆರಂಭ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ.
ನಗರದ ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ನಡೆಸಿ ಎಂದು ಕರೆ ನೀಡಿದರು.
ನಮ್ಮ ಊರಿನಲ್ಲಿ ಶಾಲೆ ಮುಚ್ಚಿದ್ದ ಕಾರಣಕ್ಕಾಗಿ 9ನೇ ತರಗತಿಯ ಹುಡುಗಿಗೆ ಮದುವೆ ಮಾಡಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಸರ್ಕಾರ ಶಾಲೆಗಳ ಆರಂಭ, ಶುಲ್ಕ ಸಂಗ್ರಹ ಸೇರಿದಂತೆ ಹಲವಾರು ವಿಷಯಗಳಲ್ಲಿ ಗೊಂದಲದ ವಾತಾವರಣ ನಿರ್ಮಿಸಿದೆ. ಶುಲ್ಕ ವಸೂಲಿಗೆ ಪೋಷಕರ ಮೇಲೆ ಒತ್ತಡ ಹಾಕಬಾರದು ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಗಂಡ, ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೂ ಮಕ್ಕಳ ಶಾಲೆಗಳಿಗೆ ಶುಲ್ಕ ಕಟ್ಟುತ್ತಿಲ್ಲ.
ಇನ್ನು ಕೆಲವರು ಕಾರಿನಲ್ಲಿ ಮಕ್ಕಳನ್ನು ತಂದು ಸ್ಕೂಲಿಗೆ ಬಿಡುತ್ತಾರೆ ಅಂಥವರೂ ಕೂಡ ಶುಲ್ಕ ಕಟ್ಟಲು ಹಿಂದೇಟು ಹಾಕುತ್ತಾರೆ. ಶಾಲೆ ಮುಚ್ಚಿದೆ ಎಂಬ ಕಾರಣಕ್ಕಾಗಿ ಪೋಷಕರು ತಾತ್ಸಾರ ಮನೋಭಾವ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಪಿಯುಸಿ ಕಾಲೇಜು ತೆರೆಯಬೇಕಾದರೆ ಒಂದು ಕೋಟಿ ರೂ. ಖರ್ಚು ಮಾಡಬೇಕು, ಪ್ರೌಢಶಾಲೆ ತೆರೆಯಲು 50 ಲಕ್ಷ ಬೇಕು. ಖಾಸಗಿ ಶಾಲಾಕಾಲೇಜುಗಳನ್ನು ನಡೆಸುವುದು ಸುಲಭದ ಮಾತಲ್ಲ. ಸರ್ಕಾರವೇ ಎಲ್ಲರಿಗೂ ಶಿಕ್ಷಣ ನೀಡಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳ ಸಹಭಾಗಿತ್ವ ಬಹಳ ಮುಖ್ಯ.
ಖಾಸಗಿ ಶಾಲೆಗಳು ಉಳಿಯಬೇಕಾದರೆ ಶಿಕ್ಷಕರಿಗೆ ಕನಿಷ್ಠ ಪ್ರಮಾಣದ ವೇತನವನ್ನು ನೀಡಲೇಬೇಕು. ಹೀಗಾಗಿ ಖಾಸಗಿ ಸಂಸ್ಥೆಗಳು ಶಾಲೆಗಳನ್ನು ಆರಂಭಿಸಬೇಕೆಂದು ಹೊರಟ್ಟಿ ಸಲಹೆ ನೀಡಿದರು. ಖಾಸಗಿ ಶಾಲೆಗಳ ಶಿಕ್ಷಕರು ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರೆಸಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಬಸವರಾಜ್ ಹೊರಟ್ಟಿ ಭರವಸೆ ನೀಡಿದರು.