ಪಡಿತರಕ್ಕೆ ರೈತರಿಂದಲೇ ಖರೀದಿ: ಕೃಷಿ ಬೆಲೆ ಆಯೋಗ ಶಿಫಾರಸು

November 13, 2020

 


ಬೆಂಗಳೂರು: ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಮೂಲಕ ಹಂಚಲು ಅಗತ್ಯವಿರುವ ಆಹಾರ ಪದಾರ್ಥಗಳನ್ನು ರಾಜ್ಯದ ರೈತರಿಂದಲೇ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದೆ.

ಈ ಸಂಬಂಧ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೇತೃತ್ವ ದಲ್ಲಿ ಶುಕ್ರವಾರ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗಿದೆ. ಸರಕಾರ ಪ್ರತಿ ವರ್ಷ ಪಡಿತರ ವ್ಯವಸ್ಥೆಗೆ 12 ಸಾ.ಕೋ. ರೂ. ಖರ್ಚು ಮಾಡುತ್ತಿದ್ದರೂ ರಾಜ್ಯದ ರೈತರಿಂದ ಕೇವಲ 800 ಕೋ. ರೂ. ಮೌಲ್ಯದ ಆಹಾರ ಧಾನ್ಯಗಳನ್ನು ಖರೀದಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಆಹಾರ ಪದ್ಧತಿಗೆ ಅನುಗುಣ ವಾಗಿ ಹಳೆ ಮೈಸೂರು ಭಾಗದಲ್ಲಿ ರಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ಅಕ್ಕಿ, ಮಲೆನಾಡು ಹಾಗೂ ಕರಾವಳಿಗೆ ಕುಚ್ಚಲಕ್ಕಿಯನ್ನು ರೈತರಿಂದಲೇ ಖರೀದಿಸಿದರೆ 200 ಕೋ.

ರೂ. ಉಳಿಯುತ್ತದೆ. ರೈತರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

ಪ್ರಮುಖ ಅಂಶಗಳು
ಜತೆಗೆ ಹೊಲಕ್ಕೊಂದು ಕೆರೆ ನಿರ್ಮಿಸಲು ಸರಕಾರದಿಂದ ಸಹಾಯಧನ ನೀಡಿ ಮೀನುಗಾರಿಕೆ, ಪಶು ಸಂಗೋಪನೆ, ತೋಟಗಾರಿಕೆ, ಕುಕ್ಕುಟೋದ್ಯಮ ಸೇರಿ ಸಮಗ್ರ ಕೃಷಿ ಪದ್ಧತಿ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ತಪ್ಪಿಸಲು ಬೆಲೆ ಯೋಜನೆ ರೂಪಿಸಿ ತಂತ್ರಜ್ಞಾನದ ಮೂಲಕ ಬೆಲೆ ಮುನ್ಸೂಚನೆ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಗೆ ಆವರ್ತ ನಿಧಿಗೆ ಕನಿಷ್ಠ 5 ಸಾ.ಕೋ. ರೂ. ಮೀಸಲಿಡಬೇಕು. ತೋಟಗಾರಿಕಾ ಉತ್ಪನ್ನಗಳ ಮಾರಾಟ ಮಾಡಲು ಕೆಎಂಎಫ್ ಮಾದರಿಯಲ್ಲಿ ತೋಟಗಾರಿಕಾ ಮಾರಾಟ ಮಹಾಮಂಡಲ ಸ್ಥಾಪಿಸಬೇಕು ಮುಂತಾದ ಹಲವು ಸಲಹೆಗಳನ್ನು ನೀಡಲಾಗಿದೆ.

ನೈಸರ್ಗಿಕ ವಿಕೋಪದಿಂದ ಹಾನಿ ಗೊಳ ಗಾಗುವ ವಾಣಿಜ್ಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 50 ಸಾ. ರೂ., ತೋಟಗಾರಿಕೆ ಮತ್ತು ಬಹು ವರ್ಷದ ಬೆಳೆಗಳಿಗೆ 1 ಲ. ರೂ. ಪರಿಹಾರ ಧನ ನೀಡಬೇಕು ಎಂದೂ ಶಿಫಾರಸಿನಲ್ಲಿ ಹೇಳಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್‌, ತೋಟಗಾರಿಕೆ ಸಚಿವ ಡಾ| ನಾರಾಯಣ ಗೌಡ ಉಪಸ್ಥಿತರಿದ್ದರು.

Related Articles

Advertisement
Previous
Next Post »