ಕೊರೊನಾದ ಸದ್ದಿನ ನಡುವೆ ಶಾಲೆಗಳ ಢಣಢಣ ಗಂಟೆ ಮೌನವಾಗಿದೆ. ಆದರೂ, ಧೈರ್ಯಮಾಡಿ ಕೆಲವು ರಾಜ್ಯಗಳು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ತೆರೆದಿವೆ. ಮಕ್ಕಳೊಂದಿಗೆ, ಕೊರೊನಾ ಕೂಡ ತರಗತಿಯೊಳಗೆ ಕಾಲಿಟ್ಟು ಆತಂಕವೂ ಸೃಷ್ಟಿಯಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಶಾಲೆ ತೆರೆಯಲಾಗಿದೆ? ಎಲ್ಲೆಲ್ಲಿ ಇನ್ನೂ ಗೊಂದಲ ಮನೆಮಾಡಿದೆ?- ಇದರ ಸವಿವರ ಇಲ್ಲಿದೆ…
ಶಾಲೆ ತೆರೆದು ತಬ್ಬಿಬ್ಟಾದ ಆಂಧ್ರ
ನ.2ರಿಂದ ಹಂತಹಂತವಾಗಿ ಶಾಲೆ ತೆರೆಯಲು ಆರಂಭಿಸಿರುವ ಆಂಧ್ರಪ್ರದೇಶದಲ್ಲಿ ಈ 4 ದಿನಗಳಲ್ಲಿ 9 ಮತ್ತು 10ನೇ ತರಗತಿಯ 575 ವಿದ್ಯಾರ್ಥಿಗಳು, 829ಕ್ಕೂ ಅಧಿಕ ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದೆ. ನೆಗಡಿ, ಜ್ವರಕ್ಕೆ ತುತ್ತಾಗಿರುವ 70,790 ಶಿಕ್ಷಕರು, 95,763 ವಿದ್ಯಾರ್ಥಿಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, ಇವರ ಕೊರೊನಾ ಫಲಿತಾಂಶ ಇನ್ನೇನು ಬರಬೇಕಿದೆ.
ಉತ್ತರಾಖಂಡದಲ್ಲೂ ಕಂಡ ಪಾಸಿಟಿವ್
ಶಾಲೆ ಆರಂಭದ ದಿನದಿಂದಲೇ (ನ.2) ಉತರಾಖಂಡದ ಅಲ್ಲಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸೋಂಕು ದೃಢವಾಗಿದೆ. ಒಟ್ಟು 20 ಶಾಲೆಗಳ 80 ಶಿಕ್ಷಕರಿಗೆ ಸೋಂಕು ತಗಲಿದೆ.
ಎಲ್ಲೆಲ್ಲಿ ಶಾಲೆ ತೆರೆದಿವೆ?
ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರಖಂಡ, ಉತ್ತರ ಪ್ರದೇಶ, ಪಂಜಾಬ್, ಸಿಕ್ಕಿಂ, ಮೇಘಾಲಯ, ಗೋವಾ.
ಇಲ್ಲೆಲ್ಲ ದೀಪಾವಳಿ ನಂತರ ಶಾಲೆ…
ಗುಜರಾತ್, ಪ. ಬಂಗಾಲ, ತಮಿಳುನಾಡು, ಕೇರಳ, ಒಡಿಶಾ, ಹರಿಯಾಣ- ಈ ರಾಜ್ಯಗಳಲ್ಲಿ ನ.16ರ ಬಳಿಕ ಶಾಲೆ 9-12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ತೆರೆಯಲಿವೆ.
ಪಠ್ಯಕ್ರಮ ಕಡಿತವಿದೆಯೇ?
ಶಾಲೆ ತೆರೆದಿರುವ ರಾಜ್ಯಗಳಲ್ಲಿ ಆದ್ಯತೆ ಮೇರೆಗೆ ಶೇ.25-40ರವರೆಗೆ ಸಿಲೆಬಸ್ ಕಡಿತಗೊಳಿಸಲಾಗಿದೆ. ಆಂಧ್ರ ಮತ್ತು ಅಸ್ಸಾಂನಲ್ಲಿ “ಒತ್ತಡರಹಿತ ಶೈಕ್ಷಣಿಕ ವರ್ಷ’ ಜಾರಿಗೊಂಡಿದೆ. ಮಹಾರಾಷ್ಟ್ರ ಶೇ.25ರಷ್ಟು ಸಿಲೆಬಸ್ ಕಡಿತಕ್ಕೆ ಚಿಂತಿಸುತ್ತಿದೆ. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ 2021ರ ಮೇ ನಂತರವಷ್ಟೇ ಮಂಡಳಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಸಿಕ್ಕಿಂ ಹೊಸ ಶೈಕ್ಷಣಿಕ ವರ್ಷದ ಕ್ಯಾಲೆಂಡರನ್ನೇ ರೂಪಿಸಿದೆ.
ಶುಲ್ಕ ಕಡಿತ ಎಲ್ಲೆಲ್ಲಿ?
ಗುಜರಾತ್ನಲ್ಲಿ ಶೇ.25, ಆಂಧ್ರಪ್ರದೇಶದಲ್ಲಿ ಶೇ.30, ರಾಜಸ್ಥಾನದಲ್ಲಿ ಶೇ.30-40ರಷ್ಟು ಶಾಲಾ ಪ್ರವೇಶ ಶುಲ್ಕ ಕಡಿತಗೊಳಿಸಲಾಗಿದೆ. ಪ. ಬಂಗಾಳದ ಖಾಸಗಿ ಶಾಲೆಗಳಿಗೆ ಶೇ.20 ಶುಲ್ಕ ಕಡಿತಗೊಳಿಸಲು ಕಲ್ಕತ್ತಾ ಹೈಕೋರ್ಟ್ ಆದೇಶಿಸಿದ್ದು, ತೀರ್ಪು ಪರಿಷ್ಕರಿಸುವಂತೆ ಮೇಲ್ಮನವಿ ಸಲ್ಲಿಕೆಯಾಗಿದೆ. ಒಡಿಶಾÏ ಹೈಕೋರ್ಟ್ ಶುಲ್ಕ ಕಡಿತ ಹೊಣೆಯನ್ನು ಸರಕಾರಕ್ಕೆ ವಹಿಸಿದೆ.
ಸುರಕ್ಷತೆ ಹೇಗಿದೆ?
ಕೇಂದ್ರ, ರಾಜ್ಯ ಸರಕಾರಗಳ ಮಾರ್ಗಸೂಚಿ ಪಾಲನೆ ಕಡ್ಡಾಯ.
ಕಂಟೈನ್ಮೆಂಟ್ ಝೋನ್ನಲ್ಲಿ ಶಾಲೆ ತೆರೆಯುವಂತಿಲ್ಲ. ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳು, ಶೈಕ್ಷಣಿಕ ಸಿಬ್ಬಂದಿ ಶಾಲೆಗೆ ಆಗಮಿಸುವಂತಿಲ್ಲ.
ಶಾಲೆ ತೆರೆದ ಎಲ್ಲ ರಾಜ್ಯಗಳಲ್ಲೂ ಪೋಷಕರಿಂದ ಸಮ್ಮತಿ ಪತ್ರ ತರುವುದು ಕಡ್ಡಾಯ.
ವರ್ಷಾಂತ್ಯದವರೆಗೂ ಕಡ್ಡಾಯ ಹಾಜರಾತಿಗೆ ಎಲ್ಲೂ ಆದೇಶಿಸಿಲ್ಲ.
ಶಾಲೆ ಆರಂಭಕ್ಕೂ ಮುನ್ನ, ನಂತರ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಒಂದು ಕೊಠಡಿಯಲ್ಲಿ ಶೇ.50 ವಿದ್ಯಾರ್ಥಿಗಳ ಉಪಸ್ಥಿತಿ.
ಜ್ವರ, ಶೀತ, ನೆಗಡಿ ಇದ್ದರೆ ಕೊರೊನಾ ಪರೀಕ್ಷೆ ಕಡ್ಡಾಯ. ತರಗತಿಗೆ ಪ್ರವೇಶ ನಿಷಿದ್ಧ.
ಸಾಮೂಹಿಕ ಪ್ರಾರ್ಥನೆಗಳಿಗೆ ಅವಕಾಶ ಕಲ್ಪಿಸಿಲ್ಲ.
ಲಂಚ್ ಬಾಕ್ಸ್ ತರುವಂತಿಲ್ಲ.
ಅಗತ್ಯಬಿದ್ದರೆ ಆನ್ಲೈನ್ ಶಿಕ್ಷಣ ಮುಂದುವರಿಕೆ.
ಇನ್ನೂ ನಿರ್ಧಾರ ಇಲ್ಲ
ಕರ್ನಾಟಕ, ದಿಲ್ಲಿ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಶಾಲೆ ತೆರೆಯುವ ಬಗ್ಗೆ ಇನ್ನೂ ಚರ್ಚೆಗಳು ಸಾಗಿವೆ. ಆದರೆ, ಶಿಕ್ಷಕರಿಗೆ ಕರ್ತವ್ಯಕ್ಕೆ ಹಾಜರಾಗಲು ಈಗಾಗಲೇ ಸೂಚಿಸಲಾಗಿದೆ.
ವಿಶ್ವಾದ್ಯಂತ ಶಾಲೆಗಳಿಗೂ ಕೊರೊನಾ ಭಯ
ಮೊಟ್ಟ ಮೊದಲು ಶಾಲೆ ತೆರೆಯುವ ಧೈರ್ಯ ಮಾಡಿದ ರಾಷ್ಟ್ರಗಳು- ಜಪಾನ್, ಚೀನ, ಡೆನ್ಮಾರ್ಕ್. ಆ ನಂತರದಲ್ಲಿ ಫಿಲಿಪ್ಪೀನ್ಸ್, ಜರ್ಮನಿ, ಅಮೆರಿಕ, ಅಲ್ಜೀರಿಯಾ, ರಷ್ಯಾ, ಇಥಿಯೋಪಿಯಾ, ಬ್ರೆಜಿಲ್, ಜೋರ್ಡಾನ್, ಟರ್ಕಿ, ಪಾಕಿಸ್ತಾನ, ಸ್ಪೇನ್, ಇಟಲಿ, ಹಂಗೇರಿ, ಉರುಗ್ವೇ ದೇಶಗಳಲ್ಲಿ ಭಾಗಶಃ ಶಾಲೆಗಳನ್ನು ತೆರೆಯಲಾಗಿದೆ. ಅಮೆರಿಕ, ಅರ್ಜೆಂಟಿನಾಗಳಲ್ಲಿ ಹೊರಾಂಗಣ ತರಗತಿ ಹೆಚ್ಚು ಆದ್ಯತೆ ನೀಡಲಾಗಿದೆ. ಬೆಲ್ಜಿಯಂ ಆನ್ಲೈನ್ ಕ್ಲಾಸ್ ಮುಂದುವರಿಸಿದೆ. ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಇಟಲಿ, ಜಪಾನ್, ಚೀನಗಳಲ್ಲಿ ಶಾಲೆಗಳನ್ನು ಮುಚ್ಚಿದ ಪ್ರಸಂಗಗಳೂ ನಡೆದಿವೆ. ಶಾಲೆ ತೆರೆದ ನಂತರ ಈ ಎಲ್ಲ ರಾಷ್ಟ್ರಗಳಲ್ಲೂ ಸೋಂಕು ಹೆಚ್ಚಾಗಿದೆ.
EmoticonEmoticon