ರಾಜೀನಾಮೆ ನೀಡಿ ರಾಜಕಾರಣ ಮಾಡಲಿ: ಎನ್.ಮಹೇಶ್‌ಗೆ ಸವಾಲು

November 07, 2020
Saturday, November 7, 2020
ಚಾಮರಾಜನಗರ: 
'ಪಕ್ಷದಲ್ಲಿ ತಿಂದು ಉಂಡು, ಅಧಿಕಾರ ಪಡೆದು ಉಚ್ಚಾಟಿತರಾಗಿರುವ ಶಾಸಕರು ಈಗ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಸಹಕಾರದಲ್ಲಿ ರಾಜಕಾರಣ ಮಾಡುವುದಲ್ಲ; ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಮ್ಮೆ ಗೆದ್ದು ರಾಜಕಾರಣ ಮಾಡಿ ತೋರಿಸಲಿ' ಎಂದು ಬಹುಜನ ಸಮಾಜಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರಿಗೆ ಸವಾಲು ಹಾಕಿದರು.

ನಗರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಎನ್‌.ಮಹೇಶ್‌ ಅವರ ಹೆಸರು ಹೇಳದೆಯೇ ಪ‍ರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದ ಅವರು, 'ಪಕ್ಷದಿಂದ ಉಚ್ಚಾಟಿತರಾದ ವ್ಯಕ್ತಿ ಈಗ ಬಿಜೆಪಿಯ ಸಚಿವರು, ಮುಖ್ಯಮಂತ್ರಿ ಅವರ ಮನೆ ಕಾಯುತ್ತಿದ್ದಾರೆ. ಸ್ವಂತ ಶಕ್ತಿ ಇಲ್ಲದೇ ವಿ.ಶ್ರೀನಿವಾಸ ಪ್ರಸಾದ್ ಅವರ ಸಹಕಾರ ಪಡೆದು ರಾಜಕಾರಣ ಮಾಡುತ್ತಿದ್ದಾರೆ' ಎಂದು ಹೇಳಿದರು.

'ಪಕ್ಷದಿಂದ ಉಚ್ಚಾಟನೆಗೊಂಡವರಿಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಬಗ್ಗೆ ಹಾಗೂ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

18 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಪಿಂಚಣಿಗಾಗಿ ವೈಯಕ್ತಿಕ ನಿವೃತ್ತಿ ಪಡೆದು ಒಮ್ಮೆ ಶಾಸಕರಾಗಲು 45 ವರ್ಷ ಬೇಕಾಯಿತು. ಅಂತಹವರು, 33 ವರ್ಷಕ್ಕೆ ಸಂಸದರಾಗಿ, 35ನೇ ವಯಸ್ಸಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಮಾಯಾವತಿ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದ ಮುಂದಿನ ಸಿಎಂ ಮಾಯಾವತಿ: ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರಲ್ಲದೇ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆದ್ದು ಮಾಯಾವತಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದರು.

'ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ರೈತ, ಬಡವರ ವಿರೋಧಿ ಕಾನೂನು ಜಾರಿಯಾಗುತ್ತಿವೆ' ಎಂದು ಆರೋಪಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ ಅವರು ಮಾತನಾಡಿ, 'ಜಿಲ್ಲಾ ಉಸ್ತುವಾರಿ ಸಚಿವರು ಚಾಮರಾಜನಗರಕ್ಕೆ ವಾರಾಂತ್ಯದಲ್ಲಿ ಪಿಕ್‌ನಿಕ್‌ ಬರುವುದನ್ನು ಬಿಡಬೇಕು. ಜಿಲ್ಲೆಯ ಅಭಿವೃದ್ದಿಗೆ ಅನುದಾನ ತರಬೇಕು' ಎಂದರು.

ಬಿಎಸ್‌ಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಮೇಶ್‌ಚಂದ್ ಭಾರತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾ ಉಸ್ತುವಾರಿ ರಾಜೇಂದ್ರ ಬೂದಿತಿಟ್ಟು, ಜಿಲ್ಲಾ ಘಟಕದ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಖಜಾಂಚಿ ರಾಜೇಂದ್ರ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮಚವಾಡಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿಗಳಾದ ಮಹಮದ್‌ಅ ಲೀಂ, ದೊಡ್ಡಿಂದುವಾಡಿ ಸಿದ್ದರಾಜು, ತಾಲ್ಲೂಕು ಅಧ್ಯಕ್ಷರಾದ ಎಸ್.ಪಿ.ಮಹೇಶ್, ಬಸವಣ್ಣ, ರಾಜಶೇಖರ ಮೂರ್ತಿ,
ಶಾಗ್ಯ ಮಹೇಶ್ ಇದ್ದರು.


Thanks for reading ರಾಜೀನಾಮೆ ನೀಡಿ ರಾಜಕಾರಣ ಮಾಡಲಿ: ಎನ್.ಮಹೇಶ್‌ಗೆ ಸವಾಲು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜೀನಾಮೆ ನೀಡಿ ರಾಜಕಾರಣ ಮಾಡಲಿ: ಎನ್.ಮಹೇಶ್‌ಗೆ ಸವಾಲು

Post a Comment