ಭೂ ಮಾಲೀಕರಿಗೆ ಸಾಂತ್ವನ ನಿವೇಶನ ಹಂಚಿಕೆ

November 13, 2020
Friday, November 13, 2020

 ಮೈಸೂರು:
 ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸಿರುವ ಕೆ.ಆರ್.ಎಸ್ ನಿಸರ್ಗ ಬಡಾವಣೆಯ ಭೂ ಮಾಲೀಕರಿಗೆ ಸಾಂತ್ವನ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.

ಕೆ.ಆರ್‌.ಎಸ್‌ ಬಡಾವಣೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ನಿವೇಶನ ಪತ್ರಗಳನ್ನು ನೀಡಿದರು.

ಯಲಚಹಳ್ಳಿ, ಗುಂಗ್ರಾಲ್‌ಛತ್ರ ಹಾಗೂ ಕಲ್ಲೂರುನಾಗನಹಳ್ಳಿ ಗ್ರಾಮಗಳ ಭೂಮಾಲೀಕರ ಜಮೀನು ಪಡೆದು ಬಡಾವಣೆ ನಿರ್ಮಿಸಲಾಗಿದೆ. ಈ ಗ್ರಾಮಗಳ ಫಲಾನುಭವಿಗಳಿಗೆ ಸಾಂತ್ವನ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.

ಜಮೀನು ನೀಡಿದ 185 ಭೂಮಾಲೀಕರಿಗೆ ಒಟ್ಟು 484 ಸಾಂತ್ವನ ನಿವೇಶಗಳನ್ನು ನೀಡಬೇಕಾಗಿದೆ. ಕಾರ್ಯಕ್ರಮದಲ್ಲಿ ಸಚಿವರು 137 ಫಲಾನುಭವಿಗಳಿಗೆ ನಿವೇಶನ ಪತ್ರ ವಿತರಿಸಿದರು.

ಲಾಟರಿ ಎತ್ತುವ ಮೂಲಕ ನಿವೇಶನಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಯಿತು.

ನಿಸರ್ಗ ಬಡಾವಣೆ ಒಟ್ಟು 496 ಎಕರೆ ಪ್ರದೇಶವನ್ನು ಒಳಗೊಂಡಿದ್ದು, ₹ 686 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 6,309 ವಿವಿಧ ನಿವೇಶನಗಳು, 207 ಮನೆಗಳು, 18 ಸಿಎ ನಿವೇಶನ, 12 ವಾಣಿಜ್ಯ ನಿವೇಶನ ಮತ್ತು 54 ಉದ್ಯಾನಗಳನ್ನು ಒಳಗೊಂಡಿದೆ.

2,934 ಮಧ್ಯಂತರ ನಿವೇಶನಗಳು ಹಂಚಿಯಾಗಿವೆ. 1,188 ಮೂಲೆ ನಿವೇಶನಗಳಿದ್ದು, 2,187 ಮಧ್ಯಂತರ ನಿವೇಶನಗಳು ಹಂಚಿಕೆಗೆ ಬಾಕಿಯಿವೆ. ಈಗಾಗಲೇ 66 ಮನೆಗಳು ಹಂಚಿಕೆಯಾಗಿದ್ದು, 141 ಮನೆಗಳು ಹಂಚಿಕೆಯಾಗಬೇಕಿದೆ ಎಂದು ಕರ್ನಾಟಕ ಗೃಹ ಮಂಡಳಿ ಮುಖ್ಯ ಎಂಜಿನಿಯರ್ ಟಿ.ಡಿ.ನಂಜುಂಡಪ್ಪ ತಿಳಿಸಿದರು.

ನಿರ್ವಹಣೆ ಮಾಡದಿದ್ದರೆ ಕ್ರಮ: ಸಚಿವ ಸೋಮಣ್ಣ ಮಾತನಾಡಿ, 'ಭೂಮಾಲೀಕರಿಗೆ ನೀಡಲಾಗಿರುವ ಸಾಂತ್ವನ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡದೆ ನಿಮ್ಮಲ್ಲೇ ಉಳಿಸಿಕೊಳ್ಳಿ. ಗೃಹ ಮಂಡಳಿ ಕಚೇರಿಯನ್ನು ಈ ಬಡಾವಣೆಯಲ್ಲಿ ತೆರೆಯಬೇಕು. ಅಧಿಕಾರಿಗಳು ವಾರಕ್ಕೊಮ್ಮೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ' ಎಂದು ಎಚ್ಚರಿಕೆ ನೀಡಿದರು.

ನೋವು ತೋಡಿಕೊಂಡ ಜಿಟಿಡಿ: ಶಾಸಕ ಜಿ.ಟಿ.ದೇವೇಗೌಡ ಮಾತಾನಾಡಿ, 'ನಾನು ಈ ಹಿಂದೆ ಇಲ್ಲಿನ ರೈತರಿಗೆ ಸಾಗುವಳಿ ಪತ್ರ ಕೊಡಿಸಲು ಹೋರಾಟ ನಡೆಸಿದ್ದೇನೆ. ಶಾನುಭೋಗರ ಮನೆ ಮುಂದೆ ರಾತ್ರಿಯೆಲ್ಲಾ ಕಾದು ಕುಳಿತು ನನ್ನ ಸ್ವಂತ ಹಣ ಕಟ್ಟಿ ಸಾಗುವಳಿ ಪತ್ರ ಕೊಡಿಸಿದ್ದೇನೆ. ಆದರೆ ಈಗಿನ ಜನರು ನನಗೆ ಅವಮಾನ ಮಾಡಿದರು. ಯಾವುದೇ ಕಾರ್ಯಕ್ರಮ ಮಾಡಲು ಬಿಡದೆ ತೊಂದರೆ ಕೊಟ್ಟರು' ಎಂದು ದುಃಖ ತೋಡಿಕೊಂಡರು.

ಸಂಸದ ಪ್ರತಾಪ ಸಿಂಹ ಮಾತನಾಡಿ, 'ಈಗಾಗಲೇ ಜಮೀನು ಕಳೆದುಕೊಂಡಿದ್ದೀರಿ, ಮುಂದೆ ಈ ನಿವೇಶನವನ್ನೂ ಮಾರಾಟ ಮಾಡಬೇಡಿ. ಈ ಬಡಾವಣೆ ಸಮೀಪದಲ್ಲೇ ಕುಶಾಲನಗರಕ್ಕೆ ಚತುಷ್ಪಥ ರಸ್ತೆಯನ್ನು ತರಲಾಗುವುದು. ಆಗ ಸುತ್ತಮುತ್ತಲಿನ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡು ಉತ್ತಮ ಬೆಲೆ ನೀಡುತ್ತೇವೆ. ಇಲ್ಲಿ ಹೆದ್ದಾರಿ ನಿರ್ಮಾಣವಾದರೆ ಭೂಮಿಯ ಬೆಲೆ ಹೆಚ್ಚಲಿದೆ' ಎಂದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ, ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ.ಮಂಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಸುರೇಶ್, ಗೃಹ ಮಂಡಳಿ ಆಯುಕ್ತ ಡಿ.ಎಸ್.ರಮೇಶ್, ಸ್ಲಂ ಬೋರ್ಡ್ ಆಯುಕ್ತ ಶಿವ ಪ್ರಕಾಶ್, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಹದೇವ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ, ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಕೃಷ್ಣಕುಮಾರ್, ತಹಶೀಲ್ದಾರ್‌ ರಕ್ಷಿತ್ ಪಾಲ್ಗೊಂಡಿದ್ದರು.

'ಜಿಟಿಡಿ ಬಿಜೆಪಿಗೆ ಬರಲಿ'

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಸಚಿವ ವಿ.ಸೋಮಣ್ಣ ಅವರು ಬಿಜೆಪಿಗೆ ಆಹ್ವಾನಿಸಿದ ಪ್ರಸಂಗ ಕಾರ್ಯಕ್ರಮದ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸೋಮಣ್ಣ ಅವರು, 'ಜಿ.ಟಿ.ದೇವೇಗೌಡ ಅವರಿಗೆ ಲಾಟರಿ ಹೊಡೆದು ಬಿಜೆಪಿಗೆ ಬಂದರೆ ಚಾಮುಂಡೇಶ್ವರಿ ಕ್ಷೇತ್ರವನ್ನು ಇನ್ನೂ ಅಭಿವೃದ್ಧಿಪಡಿಸಬಹುದು. ಜಿ.ಟಿ.ದೇವೇಗೌಡ ಮತ್ತು ಪ್ರತಾಪ ಸಿಂಹ ಜತೆಗೂಡಿದರೆ ಯಾರೂ ಊಹಿಸದ ರೀತಿಯಲ್ಲಿ ಇಲ್ಲಿ ಅಭಿವೃದ್ಧಿ ಸಾಧ್ಯ' ಎಂದರು.

Thanks for reading ಭೂ ಮಾಲೀಕರಿಗೆ ಸಾಂತ್ವನ ನಿವೇಶನ ಹಂಚಿಕೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಭೂ ಮಾಲೀಕರಿಗೆ ಸಾಂತ್ವನ ನಿವೇಶನ ಹಂಚಿಕೆ

Post a Comment