News

ಮೆಡಿಕಲ್ ಕಾಲೇಜ್‍ಗೆ ಮೀಸಲಿರಿಸಿದ ಜಾಗದಲ್ಲಿ ಸೀ ಫುಡ್ ನಿರ್ಮಾಣ’ ಆದ್ಯತೆಯ ಮೇರೆಗೆ ಬಳಸಲು ಯೋಚನೆ : ಡಿಸಿ ರಾಜೇಂದ್ರ

 

ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆಂದು ಮೀಸಲಿರಿಸಿದ 40 ಎಕರೆ ಜಮೀನನ್ನು ಮೆಗಾ ಸೀ ಫುಡ್ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಯೋಜನೆಯಿಂದ ಈ ಜಮೀನನ್ನು ರದ್ದುಪಡಿಸಲು ಗ್ರಾಮಕರಣಿಕರ ಮೂಲಕ ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಯಾವುದೇ ಪ್ರಮಾದವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದರು.

ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಈ ಜಮೀನು ಕಾದಿರಿಸಲಾಗಿತ್ತು. ಆದರೆ ಮೆಡಿಕಲ್ ಕಾಲೇಜು ಯಾವಾಗ ಮಂಜೂರಾಗುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಈಗ ಸದ್ಯಕ್ಕೆ ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಜಮೀನು ಬೇಕಾಗಿದೆ.

ಈ ಹಿನ್ನಲೆಯಲ್ಲಿ ಮೊದಲ ಆದ್ಯತೆ ನೀಡುವ ಉದ್ದೇಶದಿಂದ ದ.ಕ. ಜಿಲ್ಲೆಯ ಮೂಡುಬಿದರೆ ಮತ್ತು ಪುತ್ತೂರಿನಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣದ ಮೂಲ ಸೌಕರ್ಯ ರಚನೆ ಸಿದ್ಧಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಸಾಗರೋತ್ಪನ್ನಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಸ್ಥಾಪನೆಯಾಗಲಿದೆ ಎಂದರು.

ಮೆಗಾ ಸೀ ಫುಡ್ ನಿರ್ಮಾಣಕ್ಕೆ ಬೇರಾವುದಾದರೂ ಕಡೆ ಜಾಗ ಸಿಗಬಹುದೇ ಎಂಬ ಪರಿಶೀಲನೆ ನಡೆಸಲಾಗುವುದು. ಸೂಕ್ತ ಜಾಗ ಸಿಕ್ಕಲ್ಲಿ ಅದನ್ನೇ ಬಳಸಿಕೊಳ್ಳಲಾಗುವುದು. ಒಂದು ವೇಳೆ ಸಿಗದಿದ್ದರೆ ಬನ್ನೂರು ಗ್ರಾಮದ ಸರ್ವೆ ನಂಬರ್ 84ರಲ್ಲಿ 40 ಎಕರೆ ಜಮೀನನ್ನು ಮೆಡಿಕಲ್ ಕಾಲೇಜು ಯೋಜನೆಯಿಂದ ರದ್ದುಪಡಿಸಿ ಮೆಗಾ ಸೀ ಫುಡ್ ಯೋಜನೆಗಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರದ ಯೋಜನೆಯ ಅಡಿಯಲ್ಲಿ ಕಾಡುತ್ಪತ್ತಿ ಮಾರಾಟ ಮಾಡುವವರಿಗಾಗಿ ಚಾರ್ಮಾಡಿ ಮತ್ತು ಸುಬ್ರಹ್ಮಣ್ಯದಲ್ಲಿ 2 ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಉದ್ದೇಶಿದಲಾಗಿದೆ. ಇದಕ್ಕಾಗಿ ತಲಾ 15 ಲಕ್ಷದಂತೆ 30 ಲಕ್ಷ ರೂ. ಸಿಗಲಿದೆ. ಈ ಬಗ್ಗೆ ಲ್ಯಾಂಪ್ಸ್ ಸೊಸೈಟಿ ಜತೆ ಸಮಾಲೋಚನೆ ಮಾಡಿದ್ದೇವೆ ಎಂದು ತಿಳಿಸಿದರು.

ಕಂಬಳ ನಡೆಸಲು ಅನುಮತಿ ನೀಡುವ ಬಗ್ಗೆ ಈ ತನಕ ಯಾರಿಂದಲೂ ಮನವಿ ಬಂದಿಲ್ಲ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಮನವಿ ಬಂದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರ ನಿರ್ಧರಿಸಿದಲ್ಲಿ ಅವಕಾಶ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

ನ.17ರಿಂದ ಪದವಿ ಕಾಲೇಜು ತರಗತಿಗಳು ಆರಂಭಗೊಳ್ಳಲಿವೆ. ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ ಸೇರಿದಂತೆ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪುತ್ತೂರು – ಉಪ್ಪಿನಂಗಡಿ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದೇ ರಸ್ತೆಯ ಪಕ್ಕದಲ್ಲಿ ಪುತ್ತೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಹಾದು ಹೋಗಿದೆ. ಇಲ್ಲಿ 35 ಸೆಂಟ್ಸ್ ಜಮೀನು ಭೂಸ್ವಾಧೀನ ಸಂಬಂಧ ಗೊಂದಲವಿದೆ. ಈ ಬಗ್ಗೆ ದರಪಟ್ಟಿ ನಿಗದಿ ಬಗ್ಗೆ ಚರ್ಚಿಸಲು ಇಂದು ಸಭೆ ನಡೆಸಲಾಗಿದೆ. ಈ ಭಾಗದ ರೈತ ಮುಖಂಡರು ಹಾಗೂ ರೈತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದ್ದು ಮುಂದಿನ ಒಂದು ತಿಂಗಳ ಒಳಗಾಗಿ ಪುತ್ತೂರು ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.

ಡಿ.ಸಿ. ಮನ್ನಾ ಭೂಮಿ, ಡೀಮ್ಡ್ ಫಾರೆಸ್ಟ್ ಮತ್ತು ಫಾರೆಸ್ಟ್ ಬಫರ್ ಜಾಗದ ಬಗ್ಗೆ ಸಮಗ್ರ ಸರ್ವೇ ಕಾರ್ಯ ನಡೆಸಲಾಗುವುದು. ಅಲ್ಲದೆ ಕಂದಾಯ ವ್ಯಾಪ್ತಿಗೆ ಬರುವ ಎಲ್ಲಾ ಜಮೀನುಗಳ ಬಗ್ಗೆಯೂ ಸರ್ವೇ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ ಅವರು ಡಿ.ಸಿ. ಮನ್ನಾ ಭೂಮಿ ಯೋಜನೆ ಜಾರಿಗೆ ತರಲಾಗಿತ್ತು. ಈ ಭೂಮಿಯನ್ನು ಇನ್ನೂ ಕೂಡ ಪರಿಶಿಷ್ಟ ಸಮುದಾಯವೂ ಸೇರಿದಂತೆ ದಮನಿತ ಸಮುದಾಯಕ್ಕೆ ವಿತರಿಸುವ ಕಾರ್ಯ ಆಗಿಲ್ಲ. ಅನೇಕ ಕಡೆ ಇವುಗಳನ್ನು ಅತಿಕ್ರಮಣ ಮಾಡಲಾದ ದೂರುಗಳೂ ಇವೆ. ಈ ಬಗ್ಗೆ ಗ್ರಾಮ ಮಟ್ಟದಿಂದಲೇ ಸಮಗ್ರ ಅಧ್ಯಯನ ನಡೆಸಲಾಗುವುದು. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವವರ ಅಡಿ ಸ್ಥಳದ ಬಗ್ಗೆಯೂ ಅರಣ್ಯ ಮತ್ತು ಕಂದಾಯ ಇಲಾಖೆ ವತಿಯಿಂದ ಜಂಟಿ ಸರ್ವೇ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published.