News

ಡಿಸೆಂಬರ್’ನಲ್ಲಿ 3300 ವೈದ್ಯರ ನೇಮಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

 

ಹಾವೇರಿ: ಉತ್ಕೃಷ್ಟ, ಸಮಗ್ರ ಆರೋಗ್ಯ ಸೇವೆಯ ಅತ್ಯುತ್ತಮ ಹಾವೇರಿ ಆರೋಗ್ಯ ನಗರ ನಿರ್ಮಾಣ ಮಾಡಲಾಗುವುದು. ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣದ ಜೊತೆಗೆ ಒಂದೇ ಸಂಕೀರ್ಣದಲ್ಲಿ ನರ್ಸಿಂಗ್, ಪ್ಯಾರಾಮೆಡಿಕಲ್, ಆಯುಷ್ ಸೇರಿದಂತೆ ಸಮಗ್ರ ಆರೋಗ್ಯ ವಿಭಾಗಗಳನ್ನು ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಡಾ.ಕೆ.ಸುಧಾಕರ ಅವರು ಘೋಷಿಸಿದರು.

ದೇವಗಿರಿ-ಯಲ್ಲಾಪೂರದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡದ ನಿವೇಶನದಲ್ಲಿ ಶುಕ್ರವಾರ ಆಯೋಜಿಸಲಾದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಕಾಲಿಕ ಆಕರ್ಷಣೀಯ ವಿಶೇಷ ವಿನ್ಯಾಸ ಒಳಗೊಂಡ ನೂತನ ವೈದ್ಯಕೀಯ ಸರ್ಕಾರಿ ಕಾಲೇಜ್ ನಿರ್ಮಾಣ ಮಾಡಲಾಗುವುದು.

ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಅತ್ಯ್ತುನ್ನತ, ಅತ್ಯಾಧುನಿಕ ಆರೋಗ್ಯ ಸೇವೆಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇವಲ ಆರು ವರ್ಷದಲ್ಲಿ 157 ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳು ಮಂಜೂರಾಗಿದೆ. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಾಸೆಯಿಂದ ರಾಜ್ಯದಲ್ಲಿ ಈ ವರ್ಷ ನಾಲ್ಕು ನೂತನ ವೈದ್ಯಕೀಯ ಕಾಲೇಜ್‍ಗಳು ಮಂಜೂರಾಗಿವೆ. ಈ ಪೈಕಿ ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಒಂದಾಗಿದ್ದು, ರೂ.500 ಕೋಟಿ ವೆಚ್ಚದಲ್ಲಿ ಈ ಕಾಲೇಜ್ ನಿರ್ಮಾಣವಾಗಲಿದೆ. 157 ಕಾಲೇಜುಗಳ ಶಂಕುಸ್ಥಾಪನೆಯಾಗಿದೆ. ಈ ಕಾಲೇಜುಗಳ ಆರಂಭದಿಂದ 27 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್, 17 ಸಾವಿರ ವಿದ್ಯಾರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಇದರಿಂದ ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ನನಸಾಗಲಿದೆ. ರಾಜಕೀಯ ಇಚ್ಚಾಶಕ್ತಿ, ಸಾಮಾಜಿಕ ಬದ್ಧತೆ ಇರುವ ಸರ್ಕಾರದಿಂದ ಇಂತಹ ಕಾರ್ಯ ಸಾಧ್ಯ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಇನ್ನೂ ಮಂಜೂರಾತಿ ಹೋಗದೆ ಚಿತ್ರದುರ್ಗ ಜಿಲ್ಲೆಯ ಜನತೆ ನಿಯೋಗದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿಗಳು ಹೊಸ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿ 50 ಕೋಟಿ ರೂ. ಮಂಜೂರು ಮಾಡುವ ಮೂಲಕ ಜನಪರ ಕಾಳಜಿ ಹಾಗೂ ಆರೋಗ್ಯ ಸೇವೆಯ ಬದ್ಧತೆಯನ್ನು ತೋರಿದ್ದಾರೆ ಎಂದು ಹೇಳಿದರು.
ನೇಮಕ: ಪ್ರಸ್ತುತ 1200 ಜನರಿಗೆ ಒಬ್ಬ ವೈದ್ಯರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಂತೆ ಒಂದು ಸಾವಿರ ಜನರಿಗೆ ಒಬ್ಬ ವೈದ್ಯರಿರಬೇಕು. ಈ ಕೊರತೆ ನೀಗಿಸಲು ಬರುವ ಡಿಸೆಂಬರ್ ತಿಂಗಳಲ್ಲಿ ತಜ್ಞವೈದ್ಯರು ಸೇರಿದಂತೆ 2500 ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 800 ಹಿರಿಯ ರೆಸಿಡೆಂಟಲ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ದೂರ ದೃಷ್ಟಿಯ ಆರೋಗ್ಯ ಸೇವೆಯನ್ನು ಕಲ್ಪಿಸಲು ಮುಂದಾಗಿದ್ದು, ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಸೇವೆ, ಸುಲಬ ದರದಲ್ಲಿ ಆರೋಗ್ಯ ಸೌಲಭ್ಯ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರ ದಕ್ಷತೆಯನ್ನು ಹೆಚ್ಚಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೆ ಎಲ್ಲ ಹಂತದ ಆಸ್ಪತ್ರೆಗಳ ಉನ್ನತೀಕರಿಸಬೇಕು. 24*7 ಕಾಲ ಉತ್ತಮ ವೈದ್ಯಕೀಯ ಸೌಲಭ್ಯ ದೊರಬೇಕು. ಈಗ ಬದಲಾವಣೆ ಕಾಲ ಬಂದಿದೆ, ಬದಲಾಯಿಸುತ್ತೇವೆ. ಜನರಿಗೆ ಉತ್ಕøಷ್ಟವಾದ ಸೇವೆ ನೀಡಲು ಬದ್ಧವಾಗಿದ್ದೇವೆ ಎಂದು ಹೇಳಿದರು.
ಕೋವಿಡ್ ಮುನ್ನೆಚ್ಚರಿಕೆ: ಕರೋನಾ ವೈರಾಣು ಬಗ್ಗೆ ಎಚ್ಚರದಿಂದಿರಿ. ಮರಣ ಪ್ರಮಾಣ ಇಳಿಮುಖವಾಗಿದೆ. ಆದರೆ ಕರೋನಾ ನಮ್ಮೊಂದಿಗೆ ಇಲ್ಲ. ಕರೋನಾ ಲಸಿಕೆ ಬರೋವರಿಗೆ ಮುನ್ನೆಚ್ಚರಿಕೆಯೇ ಲಸಿಕೆಯಾಗಿದೆ. ಇದೀಗ ಚಳಿಗಾಲ ಬಂದಿದೆ, ಗರಿಷ್ಠ ಎಚ್ಚರಿಕೆಯಿಂದಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಕೊನೆಗೆ ನೂತನ ವೈದ್ಯಕೀಯ ಕಾಲೇಜ್ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ವಿರುಪಾಲ್ಷಪ್ಪ ಕಡ್ಲಿ ಹಾಗೂ ತಾ.ಪಂ.ಸದಸ್ಯ ಸತೀಶ ಸಂದಿಮನಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.